ಪಾಸಿಟಿವ್ ಸುದ್ದಿ: ರಾಜ್ಯದಲ್ಲಿ ಕೊರೋನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 4 ಸಾವಿರಕ್ಕೂ ಅಧಿಕ
ಬೆಂಗಳೂರು, ಜೂ.15: ಕರ್ನಾಟಕದಲ್ಲಿ ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಆತಂಕದ ನಡುವೆಯೂ, ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ರವಿವಾರ ಸಂಜೆ 5 ಗಂಟೆಯಿಂದ ಸೋಮವಾರ 5 ಗಂಟೆ ಒಳಗೆ ಪಾಸಿಟಿವ್ ಬಂದ 213 ಮಂದಿ ಸೇರಿದಂತೆ ಇದುವರೆಗೆ ಒಟ್ಟು 2,987 ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇದುವರೆಗೆ ಕೊರೋನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 4,135.
ರಾಜ್ಯದಲ್ಲಿ ಇಂದು ಒಂದೇ ದಿನ 213 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 7,213ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಜಿಲ್ಲೆ ಮತ್ತು ಧಾರವಾಡದಲ್ಲಿ ತಲಾ ಒಂದು ಸಾವು ಸಂಭವಿಸಿದ್ದು, ಈ ಮೂಲಕ ಸಾವಿನ ಸಂಖ್ಯೆ 88ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯ 75 ವರ್ಷದ ಮಹಿಳೆಯೊಬ್ಬರು ಜೂ.13 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂ.15 ರಂದು ಮೃತಪಟ್ಟಿದ್ದಾರೆ. ಧಾರವಾಡ ಜಿಲ್ಲೆಯ 65 ವರ್ಷದ ಪುರುಷರೊಬ್ಬರು ಜೂ.14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಅವರು ಮೃತಪಟ್ಟಿದ್ದಾರೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಕಲಬುರಗಿ 48, ಬೆಂಗಳೂರು ನಗರ 35, ಧಾರವಾಡ 34, ದಕ್ಷಿಣ ಕನ್ನಡ 23, ರಾಯಚೂರು 18, ಯಾದಗಿರಿ 13, ಬೀದರ್ 11, ಬಳ್ಳಾರಿ 10, ಕೊಪ್ಪಳ 4, ವಿಜಯಪುರ, ಬಾಗಲಕೋಟೆ ಮತ್ತು ಶಿವಮೊಗ್ಗದಲ್ಲಿ ತಲಾ 3, ಉಡುಪಿ, ಹಾವೇರಿ ಮತ್ತು ರಾಮನಗರದಲ್ಲಿ ತಲಾ 2, ಹಾಸನ ಮತ್ತು ದಾವಣೆಗೆರೆಯಲ್ಲಿ ತಲಾ ಒಂದು ಪ್ರಕರಣ ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 7,213 ಕೊರೋನ ಸೋಂಕಿತರ ಪೈಕಿ 4,135 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 180 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 88 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 2,987 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.