×
Ad

ಕೊರೋನ ಭೀತಿನ ನಡುವೆಯೇ ಬುಧವಾರದಿಂದ ಅಂತರ್ ರಾಜ್ಯ ಬಸ್ ಸಂಚಾರ ಆರಂಭ

Update: 2020-06-15 20:19 IST

ಬೆಂಗಳೂರು, ಜೂ.15: ಕೊರೋನ ಸೋಂಕು ಹೆಚ್ಚುತ್ತಿರುವ ನಡುವೆಯೇ ಅಂತರ್ ರಾಜ್ಯ ಬಸ್ ಸಂಚಾರ ಆರಂಭಿಸಲು ಸರಕಾರ ಸೂಚನೆ ನೀಡಿದ್ದು ಬುಧವಾರದಿಂದ ಆಂಧ್ರ ಪ್ರದೇಶಕ್ಕೆ ಕೆಎಸ್ಆರ್‌ಟಿಸಿ ಬಸ್‍ಗಳ ಸಂಚಾರ ಆರಂಭವಾಗಲಿದೆ.

ದೇಶದಲ್ಲಿ ಲಾಕ್‍ಡೌನ್ ಸಡಿಲವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಈಗಾಗಲೇ ಬಸ್‍ಗಳ ಸಂಚಾರ ಆರಂಭವಾಗಿದೆ. ಜೂನ್ 17ರಿಂದ ಅಂತರ್ ರಾಜ್ಯ ಬಸ್‍ಗಳ ಸಂಚಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಆರಂಭಿಕವಾಗಿ ಆಂಧ್ರಪ್ರದೇಶಕ್ಕೆ ಕೆಎಸ್ಆರ್‌ಟಿಸಿ ಬಸ್‍ಗಳ ಸಂಚಾರ ಆರಂಭವಾಗಲಿದೆ.

ಬೆಂಗಳೂರಿನಿಂದ ಅನಂತಪುರ, ಹಿಂದೂಪುರ, ಕದಿರಿ, ಪುಟ್ಟಪರ್ತಿ, ಕಲ್ಯಾಣದುರ್ಗ, ರಾಯದುರ್ಗ, ಕಡಪ, ಪ್ರೊದತ್ತೂರು, ಮಂತ್ರಾಲಯ, ತಿರುಪತಿ, ಚಿತ್ತೂರು, ಮದನಪಲ್ಲಿ, ನೆಲ್ಲೂರು ಹಾಗೂ ವಿಜಯವಾಡಕ್ಕೆ ಬಸ್‍ಗಳ ಸಂಚಾರ ಆರಂಭವಾಗಲಿದೆ. ಬಳ್ಳಾರಿಯಿಂದ ವಿಜಯವಾಡ, ಅನಂತಪುರ, ಕರ್ನೂಲ್, ಮಂತ್ರಾಲಯಕ್ಕೆ, ರಾಯಚೂರಿನಿಂದ ಮಂತ್ರಾಲಯಕ್ಕೆ ಬಸ್ ಸೇವೆ ಆರಂಭಗೊಳ್ಳಲಿದೆ ಎಂದು ತಿಳಿಸಿರುವ ಕೆಎಸ್ಆರ್‌ಟಿಸಿ, ಇಂದಿನಿಂದಲೇ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ಮಾಡಿಕೊಡಲಾಗಿದೆ.

ಬಸ್‍ನಲ್ಲಿ ಸಂಚಾರ ಮಾಡುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.

ಕರ್ನಾಟಕದಿಂದ ಕೆಎಸ್ಆರ್‌ಟಿಸಿ ಬಸ್‍ಗಳ ಸಂಚಾರ ಆರಂಭಿಸುತ್ತಿದ್ದಂತೆಯೇ ಆಂಧ್ರಪ್ರದೇಶ ಸರಕಾರ ಕೂಡಾ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಬಸ್‍ಗಳ ಸಂಚಾರವನ್ನು ಆರಂಭಿಸಲಿದೆ.

ಈ ಮೇಲ್ಕಂಡ ಮಾರ್ಗಗಳಲ್ಲಿ ಮುಂಗಡ ಆಸನಗಳನ್ನು www.ksrtc.in ವೆಬ್‍ಸೈಟ್ ಮತ್ತು ನಿಗಮ, ಫ್ರಾಂಚೈಸಿ ಕೌಂಟರ್ ಗಳ ಮುಖಾಂತರ ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ಕೆಎಸ್ಆರ್‌ಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News