ರಾಜ್ಯದಲ್ಲಿ ಸಮುದಾಯಕ್ಕೆ ಕೊರೋನ ಸೋಂಕು ಹರಡಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಜೂ. 15: ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ಮತ್ತೆ ಲಾಕ್‍ಡೌನ್ ಜಾರಿ ಮಾಡುವ ಪ್ರಶ್ನೆಯೇ ಇಲ್ಲ. ನಾಳೆ(ಜೂ.17) ಪ್ರಧಾನಿ ಮೋದಿಯವರೊಂದಿಗೆ ನಡೆಯಲಿರುವ ಸಿಎಂಗಳ ಸಭೆಯಲ್ಲಿಯೂ ಈ ಬಗ್ಗೆ ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಮತ್ತೆ ಲಾಕ್‍ಡೌನ್ ಮಾಡಲಾಗುತ್ತದೆ ಎಂಬ ವದಂತಿಗಳನ್ನು ನಂಬಬಾರದು. ಮತ್ತೆ ಲಾಕ್‍ಡೌನ್ ಮಾಡುವುದಿಲ್ಲ. ಆದರೆ, ಜನತೆ ಸೂಕ್ತ ಮುನ್ನಚ್ಚರಿಕೆ ವಹಿಸಲು ಜಾಗೃತಿ ಮೂಡಿಸಲಾಗುವುದು ಎಂದರು.
ಗುರುವಾರ ಮಾಸ್ಕ್ ಡೇ: ಕೊರೋನ ಸೋಂಕು ನಿಯಂತ್ರಣ ದೃಷ್ಟಿಯಿಂದ ರಾಜ್ಯದ ಎಲ್ಲ ಜನತೆ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ಸಂಬಂಧ ಜಾಗೃತಿ ಮೂಡಿಸಲು ಜೂ.18ರ ಗುರುವಾರ `ಮಾಸ್ಕ್ ಡೇ' ಆಚರಣೆ ಮಾಡಲಾಗುವುದು. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಮಾಸ್ಕ್ ಧರಿಸಲು ಜನ ಜಾಗೃತಿ ಮೂಡಿಸಲಾಗುವುದು ಎಂದರು.
ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯಿಂದ ವಿಧಾನಸೌಧದ ಆವರಣದಲ್ಲಿ ಚಿತ್ರನಟರು, ಕ್ರೀಡಾಪಟುಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಈ ಮಾಸ್ಕ್ ಜಾಗೃತಿ ಕಾಲ್ನಾಡಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಸ್ಕ್ ಧರಿಸದಿದ್ದರೆ 200 ರೂ.ದಂಡ ವಿಧಿಸಲಾಗುವುದು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಆತಂಕ ಬೇಡ: ರಾಜ್ಯದಲ್ಲಿ ಈವರೆಗೂ ಒಟ್ಟು 7 ಸಾವಿರ ಮಂದಿಗೆ ಕೊರೋನ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಆಪೈಕಿ 4,386 ಮಂದಿ ಮಹಾರಾಷ್ಟ್ರದಿಂದ ಬಂದವರು, ಮತ್ತವರ ಸಂಪರ್ಕದಿಂದ 1,340 ಮಂದಿಗೆ ಸೋಂಕು ತಗುಲಿದೆ. ವಿದೇಶಗಳಿಂದ ಆಗಮಿಸಿದ 216, ದಿಲ್ಲಿಯಿಂದ ಬಂದ 87, ತಮಿಳುನಾಡಿನಿಂದ ಬಂದ 67 ಹಾಗೂ ಗುಜರಾತ್‍ನಿಂದ ಆಗಮಿಸಿದ 62 ಮಂದಿಗೆ ಸೋಂಕು ತಗುಲಿದೆ. ಆದರೆ, ರಾಜ್ಯದಲ್ಲಿನ ಜನ ಸಮುದಾಯಕ್ಕೆ ಸೋಂಕು ಹರಡಿಲ್ಲ ಎಂದು ವಿವರಣೆ ನೀಡಿದರು.
ರಾಜ್ಯದಲ್ಲಿ ಶೇ.93ರಷ್ಟು ಜನರಿಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಕೇವಲ 7ರಷ್ಟು ಜನರಿಗಷ್ಟೇ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಹೀಗಾಗಿ ರಾಜ್ಯದ ಜನತೆ ಆತಂಕಪಡುವ ಅಗತ್ಯವಿಲ್ಲ. ಆದರೆ, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಲ್ಲದೆ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ತಡೆಗಟ್ಟಲು ಸರಕಾರದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಬೆಂಗಳೂರು ನಗರದಲ್ಲಿ 697 ಮಂದಿಗೆ ಸೋಂಕು ದೃಢಪಟ್ಟಿದ್ದು, 330 ಸಕ್ರಿಯ ಪ್ರಕರಣಗಳಿವೆ, ಆ ಪೈಕಿ ಕೇವಲ 6 ಮಂದಿ ಮಾತ್ರ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
7 ಸಾವಿರ ಸೋಂಕಿತರ ಪೈಕಿ 4,135 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, 2,987 ಒಟ್ಟು ಸಕ್ರಿಯ ಪ್ರಕರಣಗಳಿವೆ. 88 ಮಂದಿ ಈವರೆಗೂ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಅಂಕಿಅಂಶಕ್ಕೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ. ಜೊತೆಗೆ ಸಾವಿನ ಸಂಖ್ಯೆಯೂ ಬಹಳ ಕಡಿಮೆ ಇದ್ದು, ಸೋಂಕು ತಡೆಗೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದೇ ಇದಕ್ಕೆ ಕಾರಣ ಎಂದು ಅವರು ವಿಶ್ಲೇಷಿಸಿದರು.
ಕ್ವಾರಂಟೈನ್ ಮಾರ್ಗಸೂಚಿ: ಕೊರೋನ ಸೋಂಕು ನಿಯಂತ್ರಣ ದೃಷ್ಟಿಯಿಂದ ಕ್ವಾರಂಟೈನ್ ಅವಧಿ ಕಡಿತ ಮಾಡಲಾಗಿದೆ. ಮಹಾರಾಷ್ಟ್ರದಿಂದ ಆಗಮಿಸುವವರಿಗೆ 7 ದಿನ ಸಾಂಸ್ಥಿಕ ಮತ್ತು 7 ದಿನ ಮನೆ ಕ್ವಾರಂಟೈನ್ ಮಾಡಲಾಗುವುದು. ತಮಿಳುನಾಡು ಮತ್ತು ದಿಲ್ಲಿಯಿಂದ ಬರುವವರಿಗೆ 3ದಿನ ಸಾಂಸ್ಥಿಕ ಮತ್ತು 11 ದಿನಗಳ ಕಾಲ ಮನೆ ಕ್ವಾರಂಟೈನ್ ಮಾಡಲು ತೀರ್ಮಾನಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕೊರೋನ ಸೋಂಕು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ. ಆದುದರಿಂದ ಸಾರ್ವಜನಿಕರು ಮಾಸ್ಕ್ ಧರಿಸಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಸರಕಾರವು ಸೋಂಕು ನಿಯಂತ್ರಣ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಆರ್ಥಿಕ ಸಂಕಷ್ಟದ ನಡುವೆಯೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಸರಕಾರದಿಂದ ನೀಡುವ 4 ಸಾವಿರ ರೂ.ಗಳ ಪೈಕಿ 2 ಸಾವಿರ ರೂ.ಗಳ ಎರಡನೆ ಕಂತನ್ನು ಇಂದು ಬಿಡುಗಡೆ ಮಾಡಿದೆ. ಸುಮಾರು 50ಲಕ್ಷ ರೈತರ ಖಾತೆಗೆ ಒಟ್ಟು 1 ಸಾವಿರ ಕೋಟಿ ರೂ.ಜಮಾ ಮಾಡಲಾಗುತ್ತಿದೆ
-ಯಡಿಯೂರಪ್ಪ, ಮುಖ್ಯಮಂತ್ರಿ