×
Ad

ಜೂ.18ರ ದ್ವಿತೀಯ ಪಿಯು ಪರೀಕ್ಷೆಗೆ ಸಕಲ ಸಿದ್ಧತೆ

Update: 2020-06-15 22:12 IST

ಬೆಂಗಳೂರು, ಜೂ.15: ಪ್ರಸ್ತಕ ಸಾಲಿನ ದ್ವಿತೀಯ ಪಿಯು ಇಂಗ್ಲಿಷ್ ವಿಷಯದ ಪರೀಕ್ಷೆಯು ಜೂ.18ರಂದು ನಡೆಯುತ್ತಿದ್ದು, ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸಲು ಅನುಕೂಲವಾಗುವಂತೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. 

ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಯನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯ ಜತೆಗೆ ಅವರ ಆರೋಗ್ಯದ ದೃಷ್ಟಿಯಿಂದಲೂ ಇಲಾಖೆಯು ಸರಕಾರದ ನಿರ್ದೇಶನದ ಅನುಸಾರ ಜಿಲ್ಲಾ ಆಡಳಿತ, ಕಂದಾಯ, ಗೃಹ, ಆರೋಗ್ಯ ಇಲಾಖೆ, ಸಾರಿಗೆ ಹಾಗೂ ಇನ್ನಿತರೆ ಇಲಾಖೆಗಳ ಸಹಕಾರದೊಂದಿಗೆ ಪರೀಕ್ಷೆಯನ್ನು ನಡೆಸಲು ಈ ಕೆಳಕಂಡ ಸಿದ್ಧತೆಯನ್ನು ಕೈಗೊಳ್ಳಲಾಗಿದೆ.

ಸಿದ್ಧತೆಗಳು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆಗೆ 5.59ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದು, 1,016 ಪರೀಕ್ಷಾ ಕೇಂದ್ರಗಳಿದ್ದು, ಅವುಗಳಲ್ಲಿ ಜಿಲ್ಲಾ ಕೇಂದ್ರದಲ್ಲಿ 430, ತಾಲೂಕು ಕೇಂದ್ರದಲ್ಲಿ 328 ಮತ್ತು ಹೋಬಳಿ ಮಟ್ಟದಲ್ಲಿ 258 ಕೇಂದ್ರಗಳಿರುತ್ತವೆ. ಇವುಗಳ ಜತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಅಗತ್ಯವಿರುವಲ್ಲಿ, ಹೆಚ್ಚುವರಿ ಬ್ಲಾಕ್‍ಗಳನ್ನು ನಿರ್ಮಿಸಿ ಪರೀಕ್ಷಾ ಕೇಂದ್ರಗಳನ್ನಾಗಿ ಮಾಡಲಾಗಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ವಸತಿ ನಿಲಯಗಳಲ್ಲಿ ನೆಲಸಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅವರ ಸ್ವಂತ ಜಿಲ್ಲಾ ವ್ಯಾಪ್ತಿಯಲ್ಲಿ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಾಗಿದೆ. ಹೀಗೆ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಂಡು ಬರೆಯುವವರ ಸಂಖ್ಯೆ 18,524 ಆಗಿದೆ.

ಈಗಾಗಲೇ ನಿಗದಿಪಡಿಸಿ ಎಲ್ಲ ಪರೀಕ್ಷಾ ಕೇಂದ್ರಗಳನ್ನು ಹಾಗೂ ಹೆಚ್ಚುವರಿ ಬ್ಲಾಕ್‍ಗಳನ್ನು ಮತ್ತು ಕಟ್ಟಡದ ಎಲ್ಲ ಕೊಠಡಿಗಳನ್ನು ಸ್ಯಾನಿಟೈಸರ್ ಮಾಡಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಪೂರ್ವದಲ್ಲಿ ಎಲ್ಲ ಮಕ್ಕಳನ್ನು ಥರ್ಮಲ್ ಸ್ಕ್ಯಾನರ್ ಗಳನ್ನು 200 ವಿದ್ಯಾರ್ಥಿಗಳಿಗೆ ಒಂದರಂತೆ ಖರೀದಿಸಿ ಸ್ಕ್ಯಾನಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ. 

ಪರೀಕ್ಷಾ ಕೇಂದ್ರ ಬದಲಾವಣೆ ಬಯಸಿ ಅರ್ಜಿ ಹಾಕಿರುವ ವಿದ್ಯಾರ್ಥಿಗಳಿಗೆ ಈಗಾಗಲೇ ಇಲಾಖೆಯ ಮಟ್ಟದಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಂತರ್ ಜಾಲ www.puc.kar.nic.in ನಲ್ಲಿ ತಮ್ಮ ಹೊಸ ಪರೀಕ್ಷಾ ಕೇಂದ್ರದ ವಿವರವನ್ನು ಡೌನ್‍ಲೋಡ್ ಮಾಡಿ ಅದರ ಒಂದು ಪ್ರತಿ ಹಾಗೂ ಈ ಹಿಂದಿನ ಪರೀಕ್ಷಾ ಕೇಂದ್ರಕ್ಕೆ ಸಂಬಂಧಿಸಿದಂತಹ ಹಾಲ್‍ ಟಿಕೆಟ್(ಪ್ರವೇಶಪತ್ರ)ದೊಂದಿಗೆ ಹೊರ ಪರೀಕ್ಷಾ ಕೇಂದ್ರಕ್ಕೆ ತೆರಳಬೇಕು.

1,889 ವಿದ್ಯಾರ್ಥಿಗಳು ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬಂದು ಇಂಗ್ಲಿಷ್ ವಿಷಯಕ್ಕೆ ಪರೀಕ್ಷೆ ಬರೆಯುವರಿಗೆ ಅವರು ಆಯ್ಕೆ ಮಾಡಿಕೊಂಡ ಜಿಲ್ಲಾ ವ್ಯಾಪ್ತಿಯಲ್ಲಿ ವಿಶೇಷವಾಗಿ ಗಡಿ ಭಾಗದ ಜಿಲ್ಲೆಗಳಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಡಲಾಗಿದೆ. ಹಾಗೂ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೂ ಜಿಲ್ಲಾ ಹಂತದಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದೆ. ಇದರ ದೂರವಾಣಿ ಸಂಖ್ಯೆಯನ್ನು ಇಲಾಖಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.

ಯಾವುದೇ ವಿದ್ಯಾರ್ಥಿಗೆ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಯಾವುದಾದರು ಕಾರಣಗಳಿಂದ ಪ್ರಸ್ತುತ ನಡೆಯಲಿರುವ ಆಂಗ್ಲಭಾಷಾ ಪರೀಕ್ಷೆಗೆ ವಿದ್ಯಾರ್ಥಿಗಳು ಗೈರುಹಾಜರಾದಲ್ಲಿ ಮುಂಬರುವ ಪರೀಕ್ಷೆಯಲ್ಲಿ ರೆಗ್ಯುಲರ್ ವಿದ್ಯಾರ್ಥಿಯೆಂದೇ ಪರಿಗಣಿಸಲಾಗುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News