ಮೇಲ್ಮನೆ ಚುನಾವಣೆ: ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಹೊಣೆ ವರಿಷ್ಟರ ಹೆಗಲಿಗೆ

Update: 2020-06-15 16:58 GMT

ಬೆಂಗಳೂರು, ಜೂ. 15: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಜೂ.29ರಂದು ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ಕೋರ್ ಕಮಿಟಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಾಗಿದ್ದು, ಉಭಯ ಪಕ್ಷಗಳ ಸಭೆಯಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ವರಿಷ್ಟರಿಗೆ ಶಿಫಾರಸ್ಸು ಮಾಡಲಾಗಿದೆ.

ನಾಮಪತ್ರ ಸಲ್ಲಿಸಲು ಜೂ.18ಕ್ಕೆ ಕೊನೆಯ ದಿನವಾಗಿದ್ದು, ನಾಳೆ ಅಥವಾ ನಾಡಿದ್ದು ಅಭ್ಯರ್ಥಿಗಳನ್ನು ವರಿಷ್ಟರು ಅಂತಿಮವಾಗಿ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ. ಈ ಮಧ್ಯೆ ಕಾಂಗ್ರೆಸ್ ಪಕ್ಷದ ಹಿರಿಯ ಸಭೆ ನಾಳೆ(ಜೂ.17) ನಡೆಯಲಿದ್ದು, ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ವರಿಷ್ಟರಿಗೆ ರವಾನಿಸಲಿದ್ದಾರೆಂದು ತಿಳಿದು ಬಂದಿದೆ.

ಗೌಡರಿಗೆ ಅಧಿಕಾರ: ಜೆಡಿಎಸ್ ಅಭ್ಯರ್ಥಿ ಆಯ್ಕೆ ಮಾಡುವ ಅಧಿಕಾರವನ್ನು ಮಾಜಿ ಪ್ರಧಾನಿ ಹಾಗೂ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ನೀಡಲಾಗಿದ್ದು, ಶೀಘ್ರದಲ್ಲೆ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಲ್ಲಿನ ಜೆ.ಪಿ.ಭವನದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದ್ದು, ಪರಿಷತ್ ಚುನಾವಣೆಗೆ ಪಕ್ಷದಲ್ಲಿ ಹಲವು ಮಂದಿ ಆಕಾಂಕ್ಷಿಗಳಿದ್ದು, 29 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು 10 ಮಂದಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ. ಪಕ್ಷಕ್ಕೆ ಒಂದು ಸ್ಥಾನ ಮಾತ್ರ ಲಭ್ಯ ಇದೆ. ಹೀಗಾಗಿ ಈ ಬಗ್ಗೆ ದೇವೇಗೌಡರು ಸೂಕ್ತ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಕೇಂದ್ರ ಸಮಿತಿಗೆ ಶಿಫಾರಸ್ಸು: ವಿಧಾನಸಭೆಯಿಂದ ಪರಿಷತ್ತಿನ ಏಳು ಸ್ಥಾನಗಳ ಪೈಕಿ ಬಿಜೆಪಿಗೆ ನಾಲ್ಕು ಸ್ಥಾನಗಳು ದೊರೆಯಲಿದ್ದು, ಹಲವು ಮಂದಿ ಆಕಾಂಕ್ಷಿಗಳಿದ್ದು, ಅವರ ಹೆಸರುಗಳನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. ಶೀಘ್ರದಲ್ಲೆ ವರಿಷ್ಟರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಪ್ರಕಟಿಸಲಿದ್ದಾರೆ ಎಂದು ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News