ಕಲಬುರಗಿ: ಕೊರೋನ ಯೋಧರ ಮೇಲೆ ಕಲ್ಲು ತೂರಾಟ; ಆ್ಯಂಬುಲೆನ್ಸ್, ಪೊಲೀಸ್ ವಾಹನ ಜಖಂ

Update: 2020-06-15 17:45 GMT

ಕಲಬುರಗಿ, ಜೂ.15: ಜಿಲ್ಲೆಯಲ್ಲಿ ಕೊರೋನ ಯೋಧರ ಮೇಲಿನ ದಾಳಿ ಪ್ರಕರಣ ಮತ್ತೊಮ್ಮೆ ಮರುಕಳಿಸಿದೆ. ಚಿತ್ತಾಪುರ ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯ ಮೇಲಿನ ಹಲ್ಲೆ ಮಾಸುವ ಮುನ್ನವೇ ಕಮಲಾಪುರ ತಾಲೂಕಿನಲ್ಲಿ ಮತ್ತೊಂದು ಹಲ್ಲೆ ಘಟನೆ ನಡೆದಿದೆ ಎನ್ನಲಾಗಿದೆ. 

ವೈದ್ಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಲಾಗಿದೆ. ಈ ವೇಳೆ ನಡೆದ ಕಲ್ಲು ತೂರಾಟದಿಂದಾಗಿ ಪೊಲೀಸ್ ವಾಹನ, ಆ್ಯಂಬುಲೆನ್ಸ್ ಹಾಗೂ ಮತ್ತಿತರ ವಾಹನಗಳು ಜಖಂ ಆಗಿವೆ ಎಂದು ತಿಳಿದುಬಂದಿದೆ.

ಮುಂಬೈಯಿಂದ ವಾಪಸ್ಸಾದ ವಲಸಿಗರ ಪೈಕಿ 14 ಜನರಿಗೆ ಪಾಸಿಟಿವ್ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಕರೆತರಲು ಆರೋಗ್ಯ ಇಲಾಖೆ ಸಿಬ್ಬಂದಿ ಪೊಲೀಸರ ಜೊತೆ ತಾಂಡಾಕ್ಕೆ ತೆರಳಿತ್ತು. ಈ ವೇಳೆ ತಾಂಡಾದ ನಿವಾಸಿಗಳು ಏಕಾಏಕಿ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎನ್ನಲಾಗಿದ್ದು, ಪೊಲೀಸ್ ವಾಹನ, ಆ್ಯಂಬುಲೆನ್ಸ್, ಆರೋಗ್ಯ ಇಲಾಖೆ ಸಿಬ್ಬಂದಿಯ ವಾಹನಗಳ ಮೇಲೆ ಕಲ್ಲು ತೂರಲಾಗಿದ್ದು, ಗಾಜುಗಳು ಪುಡಿಪುಡಿಯಾಗಿವೆ. ಈ ವೇಳೆ ವೈದ್ಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ.

ಇನ್ನು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಸಿಬ್ಬಂದಿ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆ ಸಂಬಂಧ ಜಿಲ್ಲಾಧಿಕಾರಿ ಶರತ್ ಬಿ. ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕೊರೋನ ವಾರಿಯರ್ಸ್ ಮೇಲೆ ದಾಳಿ ಮಾಡಿದವ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆಯೂ ಕಲಬುರಗಿಲ್ಲಿ ಈ ರೀತಿ ಘಟನೆಯಾಗಿತ್ತು. ಇದೀಗ ಕಮಲಾಪುರ ತಾಲೂಕಿನಲ್ಲಿ ಘಟಿಸಿದೆ. ಇಂತಹ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ. ಹಲ್ಲೆಕೋರರ ಮೇಲೆ ಕಠಿಣ ಕ್ರಮ ಖಚಿತ. ಕೊರೋನ ವಾರಿಯರ್ಸ್ ರಕ್ಷಣೆಗೆ ಜಿಲ್ಲಾಡಳಿತ ಬದ್ಧವಾಗಿದೆ" ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News