ಜಿಮ್ಸ್ 24x7 ಟೆಲಿ ಐಸಿಯುಗೆ ಆನ್‍ಲೈನ್ ಚಾಲನೆ ನೀಡಿದ ಡಾ. ಅಶ್ವಥ್ ನಾರಾಯಣ

Update: 2020-06-15 17:37 GMT

ಬೆಂಗಳೂರು, ಜೂ.15: ಗುಲ್ಬರ್ಗ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಜಿಮ್ಸ್)ನಲ್ಲಿ ಕರ್ನಾಟಕದ ಎರಡನೇ 24*7 ಟೆಲಿ ಐಸಿಯು ಸೇವೆಗೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಆನ್‍ಲೈನ್ ಮೂಲಕ ಸೋಮವಾರ ಚಾಲನೆ ನೀಡಿದರು.

ವಿಕಾಸಸೌಧದಲ್ಲಿ ಆನ್‍ಲೈನ್ ಮೂಲಕ ಜಿಮ್ಸ್ ನ ಟೆಲಿ ಐಸಿಯು ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಸಿಟಿ(ಆಕ್ಷನ್ ಕೊವಿಡ್-19 ಟೀಮ್) ಗ್ರಾಂಟ್ಸ್ ನೆರವಿನೊಂದಿಗೆ ಕರ್ನಾಟಕ ಸರಕಾರ ಜಿಮ್ಸ್ ನಲ್ಲಿ ಕರ್ನಾಟಕದ ಎರಡನೇ 24*7 ಟೆಲಿ ಐಸಿಯು ಸೇವೆ ಆರಂಭಿಸಿದೆ. ರಾಜ್ಯಾದ್ಯಂತ  ಆಸ್ಪತ್ರೆಗಳಲ್ಲಿ ಕ್ಲೌಡ್ ಫಿಸಿಷಿಯನ್‍ನ ಸೇವೆ ಬಳಸಿಕೊಳ್ಳುವುದರಿಂದ ಗರಿಷ್ಠ ಸಂಖ್ಯೆಯ ರೋಗಿಗಳಿಗೆ ಐಸಿಯು ಚಿಕಿತ್ಸೆ ಸೌಲಭ್ಯ ದೊರೆಯಲು ಸಾಧ್ಯ ಎಂದರು.

ರಾಜ್ಯದಲ್ಲಿ ಮೊದಲ ಟೆಲಿ ಐಸಿಯು ಸೌಲಭ್ಯ ಪಡೆದದ್ದು ರಾಮನಗರದ ಜಿಲ್ಲಾ ಆಸ್ಪತ್ರೆ. ಜಿಮ್ಸ್ ಈ ಸೇವೆ ಪಡೆಯುತ್ತಿರುವ ರಾಜ್ಯದ ಎರಡನೇ ಆಸ್ಪತ್ರೆ. ಜಿಮ್ಸ್ ನ 70 ಹಾಸಿಗೆಗಳ ಪೈಕಿ 26 ಹಾಸಿಗೆಗಳನ್ನು ವಿಶೇಷ ತರಬೇತಿ ಪಡೆದ ತೀವ್ರ ನಿಗಾ ಘಟಕದ ತಜ್ಞರು ಮತ್ತು ದಾದಿಯರನ್ನೊಳಗೊಂಡ 10 ಜನರ ತಂಡ 24*7 ನಿಗಾವಹಿಸಲಿದೆ. ಆರೋಗ್ಯ-ತಂತ್ರಜ್ಞಾನ ವೇದಿಕೆ ಮತ್ತು ಆಸ್ಪತ್ರೆಗಳ ನಡುವೆ ಸಮನ್ವಯತೆ ಸಾಧಿಸಿ ಗುಣಮಟ್ಟದ ಸೇವೆ ಒದಗಿಸಲು ಡಾ.ತ್ರಿಲೋಕ್‍ ಚಂದ್ರ ನೇತೃತ್ವದಲ್ಲಿ ತಂಡ ಬದ್ಧವಾಗಿದೆ ಎಂದು ಹೇಳಿದರು.

ಟೆಲಿ ಐಸಿಯು ನಿರ್ವಹಣೆ: ತೀವ್ರ ನಿಗಾಘಟಕದ ಇಎಂಆರ್, ಆಡಿಯೊ-ದೃಶ್ಯಗಳು ಮತ್ತು ಎಚ್ಚರಿಕೆ ವ್ಯವಸ್ಥೆಗಳನ್ನು ಬಳಸಿಕೊಂಡು ಗಂಭೀರ ಸ್ಥಿತಿಯಲ್ಲಿರುವ ಕೊವಿಡ್ 19 ರೋಗಿಗಳ ಬಗ್ಗೆ ನಿಗಾವಹಿಸುವ ಕ್ಲೌಡ್‍ ಫಿಸಿಷಿಯನ್ ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ ನೀಡುವರು.

ಸಿಸಿಟಿವಿ, ಇಂಟರ್ನೆಟ್ ಸಂಪರ್ಕಿತ ಸೆನ್ಸರ್ ಗಳ ಮೂಲಕ ರೋಗಿಯ ಸ್ಥಿತಿಗತಿಯ ಬಗ್ಗೆ ರಿಯಲ್‍ಟೈಮ್ ಮಾಹಿತಿ ಪಡೆಯುವ ತೀವ್ರ ನಿಗಾ ಘಟಕದ ತಜ್ಞರು ಹಾಗೂ ದಾದಿಯರು, ಈ ಸಂಬಂಧ ಆಸ್ಪತ್ರೆಯ ವೈದ್ಯ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡುವರು. ಕೊರೋನ ಸೋಂಕಿತರ ಸಾವಿನ ಸಂಖ್ಯೆತಗ್ಗಿಸಲು ಈ ವಿಶಿಷ್ಟ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಅಗತ್ಯ ಇರುವ ಕಡೆಗಳಲ್ಲಿ ಟೆಲಿ ಐಸಿಯು ಸೇವೆ ಒದಗಿಸಲು ಎಸಿಟಿ ಬದ್ಧವಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಸ್ಟಾರ್ಟ್ ಅಪ್ ವಿಷನ್‍ ಗ್ರೂಪ್ ಅಧ್ಯಕ್ಷರೂ ಆದ ಎಸಿಟಿ ವಕ್ತಾರ ಪ್ರಶಾಂತ್ ಪ್ರಕಾಶ್, ಕ್ಲೌಡ್‍ ಫಿಸಿಷಿಯನ್‍ ನ ಸಹ ಸಂಸ್ಥಾಪಕ ಡಾ. ದಿಲೀಪ್‍ರಾಮನ್ ಉಪಸ್ಥಿತರಿದ್ದರು.

ಏನಿದು ಎಸಿಟಿ ಗ್ರಾಂಟ್ಸ್: ಕೊವಿಡ್-19 ವಿರುದ್ಧ ಹೋರಾಟದಲ್ಲಿ ಪ್ರಬಲ ಪರಿಣಾಮ ಬೀರಬಲ್ಲ ವಿಷಯಗಳ ಬಗ್ಗೆ ವಿಶಿಷ್ಟ ಮಾಹಿತಿ ಒದಗಿಸುವ ಜತಗೆ ಅಗತ್ಯ ಸೌಕರ್ಯ ಕಲ್ಪಿಸಲು ನೆರವಾಗುವ ಸ್ಟಾರ್ಟ್ ಅಪ್ ಸಮೂಹದ 100 ಕೋಟಿ ಅನುದಾನವೇ ಎಸಿಟಿ(ಆಕ್ಷನ್ ಕೊವಿಡ್-19 ಟೀಮ್) ಗ್ರಾಂಟ್ಸ್. ಕೊರೋನ ಹರಡದಂತೆ ಎಚ್ಚರ ವಹಿಸುವ, ಸೋಂಕು ಪತ್ತೆ ಪರೀಕ್ಷೆ ನಡೆಸುವ, ಆರೋಗ್ಯ ಕಾರ್ಯಕರ್ತರು ಮತ್ತು ಆಸ್ಪತ್ರೆಗಳಿಗೆ ಅಗತ್ಯ ಬೆಂಬಲ ಒದಗಿಸಿ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ನಿರ್ವಹಿಸಿ ಮಾನಸಿಕ ಸ್ಥೈರ್ಯ ನೀಡುವ ತಂಡಗಳು ಮತ್ತು ಸ್ಟಾರ್ಟ್ ಅಪ್‍ಗಳನ್ನು ಎಸಿಟಿ ಬೆಂಬಲಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News