ಮೂವರು ಅಧಿಕಾರಿಗಳ ಮನೆ, ಕಚೇರಿ ಸೇರಿ 12 ಕಡೆಗಳಲ್ಲಿ ಎಸಿಬಿ ದಾಳಿ

Update: 2020-06-16 12:07 GMT

ಬೆಂಗಳೂರು, ಜೂ.16: ಆದಾಯಕ್ಕಿಂತ ಅಧಿಕ ಸಂಪತ್ತು ಸಂಪಾದನೆ ಆರೋಪ ಕೇಳಿಬಂದ ಹಿನ್ನೆಲೆ ಮೂವರು ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ 12 ಕಡೆಗಳಲ್ಲಿ ಎಸಿಬಿ ತನಿಖಾಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯ ಮುಂದುವರಿಸಿದ್ದಾರೆ.

ಬೆಳಗಾವಿಯ ಕಾನೂನು ಮಾಪನಶಾಸ್ತ್ರ ಸಹಾಯ ನಿಯಂತ್ರಕರ ಕಚೇರಿಯ ಸಹಾಯಕ ನಿಯಂತ್ರಕ ಸುಭಾಷ ಸುರೇಂದ್ರ ಅವರ ಸಹೋದರನ ರುಕ್ಮಿಣಿ ನಗರದ ವಾಸದ ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ನಿಯಂತ್ರಕರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಅದೇ ರೀತಿ, ವಿಜಯಪುರ ಪ್ರಭಾರ ಭೂ ದಾಖಲೆಗಳ ಉಪ ನಿರ್ದೇಶಕ ಎಲ್. ಗೋಪಾಲ ಮಾಲಗತ್ತಿ ಅವರ ಕೊಪ್ಪಳ ಜಿಲ್ಲೆಯ ಜೆ.ಎಚ್. ಪಟೇಲ್ ನಗರದಲ್ಲಿರುವ ವಾಸದ ಮನೆ ಹಾಗೂ ಇವರು ವಾಸವಿರುವ ಬಾಗಲಕೋಟೆ ಜಿಲ್ಲೆ ಸರಕಾರಿ ವಸತಿ ಗೃಹ, ದಾಖಲೆಗಳ ಉಪ ನಿರ್ದೇಶಕರ ಕಚೇರಿ ಮೇಲೆ ದಾಳಿ ನಡೆಸಿದ್ದು, ದಾಖಲಾತಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯ ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಭಿವೃದ್ಧಿ ಅಧಿಕಾರಿ ಜಗದೇವಪ್ಪ ಅವರ ಕಲಬುರಗಿ ಜಿಲ್ಲೆ ಪೂಜಾ ಕಾಲನಿಯ ಸ್ಕ್ವೇರ್ ಸಂಕೀರ್ಣದಲ್ಲಿನ ಅಂಗಡಿ, ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಸರಕಾರಿ ನೌಕರರು ಹೊಂದಿರುವ ಆಸ್ತಿಮೂಲ ಬಹಿರಂಗ ಪಡಿಸುವುದಾಗಿ ಎಸಿಬಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News