ಕಾಂಗ್ರೆಸ್‍ ಗೆ ಶಕ್ತಿ ತುಂಬುವವರನ್ನು ಪರಿಷತ್‍ಗೆ ನೇಮಕ ಮಾಡಿ: ಸಿ.ಎಂ.ಇಬ್ರಾಹಿಂ

Update: 2020-06-16 12:21 GMT

ಬೆಂಗಳೂರು, ಜೂ.16: ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್‍ಗೆ ಈಗ ಯುದ್ದದ ಸಂದರ್ಭವಿದ್ದಂತೆ. ಹೀಗಾಗಿ ಕಾಂಗ್ರೆಸ್ ಸಿದ್ಧಾಂತವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯದು ಪಕ್ಷಕ್ಕೆ ಶಕ್ತಿ ತುಂಬುವಂತಹ ಸಾಮರ್ಥ್ಯ ಇರುವವರನ್ನು ಮಾತ್ರ ವಿಧಾನಪರಿಷಗ್‍ಗೆ ನೇಮಕ ಮಾಡಬೇಕೆಂದು ಪಕ್ಷದ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಇದ್ದಿದ್ದರೆ, ಜಾತಿ, ಸಾಮಾಜಿಕ ನ್ಯಾಯ ಎಂಬ ಮಾನದಂಡ ಅನುಸರಿಸಬಹುದಾಗಿತ್ತು. ಆದರೆ, ಈಗ ವಿರೋಧ ಪಕ್ಷದಲ್ಲಿರುವುದರಿಂದ ಮುಂದಿನ ಚುನಾವಣೆಗೆ ಪೂರ್ವ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಪಕ್ಷಕ್ಕೆ ಶಕ್ತಿ ತುಂಬುವಂತಹ ಸಮರ್ಥರನ್ನು ಮಾತ್ರ ಪರಿಷತ್‍ಗೆ ಆಯ್ಕೆ ಮಾಡುವುದು ಸೂಕ್ತವೆಂದು ತಿಳಿಸಿದ್ದಾರೆ.

ಕೆಪಿಸಿಸಿ ವತಿಯಿಂದ ಸಂಭವನೀಯ ಪಟ್ಟಿಯನ್ನು ದೆಹಲಿಯ ವರಿಷ್ಟರಿಗೆ ಕಳುಹಿಸಿಕೊಡಲಾಗುತ್ತದೆ. ಎಲ್ಲವನ್ನು ಪರಿಶೀಲಿಸಿದ ನಂತರ ಹೈಕಮಾಂಡ್ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದೆ. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲವೆಂದು ಅವರು ತಿಳಿಸಿದ್ದಾರೆ.

ಬಿಜೆಪಿಯಲ್ಲಿ ಒಳ ಜಗಳ ಹೆಚ್ಚಾಗಿದೆ. ರಾಜ್ಯಸಭೆ ಚುನಾವಣೆಗೆ ಮುಖ್ಯಮಂತ್ರಿ ಶಿಫಾರಸ್ಸು ಮಾಡುವ ಹೆಸರನ್ನೇ ಇಲ್ಲಿಯವರೆಗೂ ಪರಿಗಣಿಸಲಾಗುತ್ತಿತ್ತು. ಆದರೆ, ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧಾರವನ್ನು ಪರಿಗಣಿಸಲೇ ಇಲ್ಲ. ಇದು ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News