×
Ad

ದೇಶದಲ್ಲಿ ಕೋವಿಡ್-19 ಪರೀಕ್ಷಾ ಸಾಮರ್ಥ್ಯ ಹೆಚ್ಚಳ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

Update: 2020-06-16 21:22 IST

ಹೊಸದಿಲ್ಲಿ, ಜೂ.16: ಹಾಸಿಗೆಗಳ ಲಭ್ಯತೆ ಹೆಚ್ಚಳ ಹಾಗು ನಿರ್ಣಾಯಕ ಆರೋಗ್ಯ ಆರೈಕೆ ಮತ್ತು ಸೇವೆ ಸೌಲಭ್ಯಗಳ ನ್ಯಾಯಯುತ ಮತ್ತು ಪಾರದರ್ಶಕ ಶುಲ್ಕ ವಿಧಿಸುವಿಕೆ ಖಚಿತಪಡಿಸಿಕೊಳ್ಳಲು ಖಾಸಗಿ ಆರೋಗ್ಯ ಸೇವೆ ಪೂರೈಕೆದಾರರೊಂದಿಗೆ ಪೂರ್ವಭಾವಿ ಮಾತುಕತೆಗೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೂಚಿಸಿದೆ.

ಈ ನಿಟ್ಟಿನಲ್ಲಿ ಕರ್ನಾಟಕ, ತಮಿಳುನಾಡು, ಒಡಿಶಾ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಈಗಾಗಲೆ ಕ್ರಮ ಕೈಗೊಂಡಿವೆ.  ಕೋವಿಡ್-19 ರೋಗಿಗಳನ್ನು ದಾಖಲಿಸಿಕೊಂಡು, ನಿರ್ಣಾಯಕ ಚಿಕಿತ್ಸೆ ನೀಡಲು ಸಮಂಜಸವಾದ ದರ ಮತ್ತು ವ್ಯವಸ್ಥೆಗಳನ್ನು ಒದಗಿಸುವ ಕುರಿತಂತೆ ಆ ರಾಜ್ಯಗಳು ಖಾಸಗಿ ವಲಯದೊಂದಿಗೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಬಂದಿವೆ.

ಖಾಸಗಿ ವಲಯದ ಆರೋಗ್ಯ ಆರೈಕೆ ಒದಗಿಸುವವರೊಂದಿಗೆ ಪೂರ್ವಭಾವಿ ಮಾತುಕತೆ ನಡೆಸಲು ಮತ್ತು ಸಾರ್ವಜನಿಕ ಹಾಗೂ ಖಾಸಗಿ ಆರೋಗ್ಯ ಸೌಲಭ್ಯಗಳನ್ನು ಕ್ರೋಡೀಕರಿಸುವ ನಿಟ್ಟಿನಲ್ಲಿ ಪರಿಗಣಿಸಲು ರಾಜ್ಯಗಳಿಗೆ ತಿಳಿಸಲಾಗಿದೆ. ಇದು ಕೋವಿಡ್-19 ರೋಗಿಗಳ ಅಪೇಕ್ಷಿತ, ಉತ್ತಮ ಗುಣಮಟ್ಟದ ಮತ್ತು ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಗೆ ಸಹಕಾರಿಯಾಗುತ್ತದೆ.

ಮಾರಕ ಕೊರೋನ ವೈರಾಣು ಸೋಂಕಿತ ವ್ಯಕ್ತಿಗಳ ಪತ್ತೆಗೆ ದೇಶದಲ್ಲಿ ಪರೀಕ್ಷಾ ಸಾಮರ್ಥ್ಯ ನಿರಂತರವಾಗಿ ಹೆಚ್ಚುತ್ತಿದೆ. ದೇಶ ಪ್ರಸ್ತುತ ಪ್ರತಿ ನಿತ್ಯ 3 ಲಕ್ಷ ಮಾದರಿ ಪರೀಕ್ಷೆ ಸಾಮರ್ಥ್ಯ ರೂಢಿಸಿಕೊಂಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1,54,935 ಮಾದರಿ ಪರೀಕ್ಷೆ ನಡೆಸಲಾಗಿದ್ದು, ಈವರೆಗೆ 59,21,069 ಮಾದರಿಗಳ ಪರೀಕ್ಷೆ ನಡೆಸಿದಂತಾಗಿದೆ. ಇಂದಿನವರೆಗೆ ದೇಶದಲ್ಲಿ 907 ಪ್ರಯೋಗಾಲಯಗಳ ಜಾಲವನ್ನು ರೂಪಿಸಲಾಗಿದೆ. ಇದರಲ್ಲಿ 659 ಸರಕಾರಿ ಮತ್ತು 248 ಖಾಸಗಿ ವಲಯದ ಪ್ರಯೋಗಾಲಯಗಳು ಸೇರಿವೆ.

ದಿಲ್ಲಿಯಲ್ಲಿ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ, ಎಲ್ಲ 11 ಜಿಲ್ಲೆಗಳಲ್ಲೂ ಆಯಾ ಜಿಲ್ಲೆಗೆ ಸಂಬಂಧಿಸಿದ ಮಾದರಿಗಳ ಪರೀಕ್ಷೆಗೆ ಪ್ರತ್ಯೇಕ ಪ್ರಯೋಗಾಲಯ ನಿಯೋಜಿಸಲಾಗಿದೆ. ಪ್ರತಿ ಜಿಲ್ಲೆಯ ಮಾದರಿಗಳನ್ನು ಈ ಪ್ರಯೋಗಾಲಯಗಳಿಗೆ ಸಕಾಲಿಕ ಪರೀಕ್ಷೆ ಮತ್ತು ವಿಳಂಬವಿಲ್ಲದೆ ವರದಿ ಪಡೆಯಲು ಕಳುಹಿಸಲಾಗುತ್ತಿದೆ. ಪ್ರಸ್ತುತ ದಿಲ್ಲಿಯಲ್ಲಿ 42 ಪ್ರಯೋಗಾಲಯಗಳಿದ್ದು, ಪ್ರತಿನಿತ್ಯ ಸುಮಾರು 17 ಸಾವಿರ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿವೆ.

ಸಕಾಲಿಕ ಪಿಸಿಆರ್ (ಆರ್.ಟಿ.-ಪಿಸಿಆರ್) ಕೋವಿಡ್-19 ಪತ್ತೆಯಲ್ಲಿ ಗೋಲ್ಡ್ ಸ್ಟಾಂಡರ್ಡ್ ಮುಂಚೂಣಿಯ ಪರೀಕ್ಷಾ ವಿಧಾನವಾಗಿದ್ದು, ದೇಶದಾದ್ಯಂತ ಇರುವ 907 ಪ್ರಯೋಗಾಲಯಗಳನ್ನು ಹೆಚ್ಚಿನ ಪರೀಕ್ಷಾ ಸಾಮರ್ಥ್ಯ ವರ್ಧಿಸಲು ಬಳಸಬಹುದಾಗಿದೆ. ಆದಾಗ್ಯೂ, ಈ ಪರೀಕ್ಷೆಗಳಿಗೆ ನೈಪುಣ್ಯತೆಯ ಪ್ರಯೋಗಾಲಯಗಳ ಸೌಲಭ್ಯದ ಅಗತ್ಯವಿದೆ. ಈ ಉನ್ನತ ಗುಣಮಟ್ಟದ ಪ್ರಯೋಗಾಲಯಗಳಿಗೆ ಮಾದರಿಗಳನ್ನು ಸಾಗಿಸುವ ಸಮಯವೂ ಸೇರಿದಂತೆ ಕನಿಷ್ಠ 2-5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಟ್ರೂನಾಟ್ ಮತ್ತು ಸಿಬಿ ನಾಟ್ ಸಂಚಾರಿ ಸ್ವರೂಪದ್ದಾಗಿದ್ದು, ಇದನ್ನು ದೂರದ ಪ್ರದೇಶಗಳಲ್ಲಿ ಬಳಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News