ಕೋವಿಡ್ ಪರೀಕ್ಷೆಯಲ್ಲಿ ಯಾದಗಿರಿ ಪ್ರಥಮ: ಡಾ.ಕೆ.ಸುಧಾಕರ್
ಬೆಂಗಳೂರು, ಜೂ.16: ಕಳೆದ 10 ದಿನಗಳಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಕೋವಿಡ್ ಶಂಕಿತರನ್ನು ಪರೀಕ್ಷೆಗೆ ಒಳಪಡಿಸಿದ ಜಿಲ್ಲೆಗಳಲ್ಲಿ ಯಾದಗಿರಿ ಮೊದಲ ಸ್ಥಾನದಲ್ಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಯಾದಗಿರಿ ಜಿಲ್ಲೆಯಲ್ಲಿ ಪ್ರತಿ ಮಿಲಿಯನ್(10 ಲಕ್ಷ) ಜನಸಂಖ್ಯೆಯಲ್ಲಿ 7,297 ಮಂದಿಗೆ ಕೊರೋನ ಪರೀಕ್ಷೆ ಮಾಡಲಾಗಿದೆ. ಪ್ರತಿ ಮಿಲಿಯನ್‍ಗೆ 4,843 ಪರೀಕ್ಷೆ ಮಾಡುವ ಮೂಲಕ ಕಲಬುರಗಿ ಎರಡನೆ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ದಿನಂಪ್ರತಿ 3,000 ಕೆಜಿಯಷ್ಟು ಕೊರೋನ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಮಾಸ್ಕ್, ಪಿಪಿಇ ಕಿಟ್, ಕೈ ಗವುಸುಗಳು ಇದರ ಮೂಲ. ಈ ತ್ಯಾಜ್ಯದ ವಿಲೇವಾರಿ ವೈಜ್ಞಾನಿಕವಾಗಿ ಆಗಬೇಕು ಅದು ಕ್ಲಿಷ್ಟಕರ ಕೂಡಾ, ಈ ತ್ಯಾಜ್ಯ ಕಡಿಮೆ ಮಾಡಲು ಸಾರ್ವಜನಿಕರು ಮನೆಯಲ್ಲೆ ತಯಾರಿಸಿದ ಮರು ಬಳಕೆಯ ಮಾಸ್ಕ್ ಬಳಕೆಯನ್ನು ರೂಢಿಸಿಕೊಳ್ಳಬೇಕು ಎಂದು ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.