ಹರಕೆಯ ಹೆಸರಲ್ಲಿ ಮಗುವನ್ನು ತೊಟ್ಟಿಲಲ್ಲಿ ಕಟ್ಟಿ ಬಾವಿಗೆ ಇಳಿಸುವ ಪದ್ಧತಿ: ವಿಡಿಯೋ ವೈರಲ್

Update: 2020-06-16 17:58 GMT

ಹಾವೇರಿ, ಜೂ.16: ಹರಕೆಯ ಹೆಸರಿನಲ್ಲಿ ಪುಟಾಣಿ ಮಕ್ಕಳನ್ನು ತೊಟ್ಟಿಲಲ್ಲಿ ಕಟ್ಟಿ ಬಾವಿಗೆ ಬಿಟ್ಟು ನೀರು ತಾಗಿಸಿ ಮತ್ತೆ ಮೇಲೆತ್ತುವ ಘಟನೆ ಹಾವೇರಿ ಜಿಲ್ಲೆಯ ಬಂಕಾಪುರ ಪಟ್ಟಣದ ಹಜರತ್ ಪೀರ್ ಸಯ್ಯದ್ ಅಲ್ಲಾವುದ್ದೀನ್ ಶಾ ಖಾದ್ರಿ ದರ್ಗಾದಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ದರ್ಗಾದ ಮುಖ್ಯಸ್ಥರ ಮುಂದಾಳತ್ವದಲ್ಲಿಯೇ ಇದನ್ನು ಆಚರಣೆ ಮಾಡಲಾಗುತ್ತಿದೆ ಎನ್ನಲಾಗಿದ್ದು, ಹರಕೆ ಹೆಸರಲ್ಲಿ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುವ ಇಂತಹ ಪದ್ಧತಿಗಳ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಮಕ್ಕಳು ಆಗದಿದ್ದರೆ, ಮಗುವಿನ ಆರೋಗ್ಯ ಸಮಸ್ಯೆ ನಿವಾರಣೆಗೆ ಪುಟ್ಟ ಮಕ್ಕಳನ್ನು ತೊಟ್ಟಿಲಲ್ಲಿ ಕಟ್ಟಿ ಬಾವಿಗೆ ಬಿಟ್ಟು ನೀರು ತಾಗಿಸಿ ಮತ್ತೆ ಮೇಲೆತ್ತುವ ಹರಕೆ ಪದ್ಧತಿ ಈ ದರ್ಗಾದಲ್ಲಿ ಜಾರಿಯಲ್ಲಿದೆ. ಅದರಂತೆ ಇತ್ತೀಚಿಗೆ ಪುಟ್ಟ ಮಗುವೊಂದನ್ನು ತೊಟ್ಟಿಲಲ್ಲಿ ಕಟ್ಟಿ ಬಾವಿಗೆ ಬಿಟ್ಟು ನೀರು ತಾಗಿಸಿ ಮತ್ತೆ ಮೇಲೆತ್ತಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಘಟನೆ ಬೆಳಕಿಗೆ ಬಂದ ನಂತರ ದರ್ಗಾದ ಬಾವಿಯ ಸುತ್ತ ಬೇಲಿ ಹಾಕಲಾಗಿದೆ. ಯಾರೂ ಅದನ್ನು ಬಳಸದಂತೆ ನಿರ್ಬಂಧ ವಿಧಿಸಲಾಗಿದೆ. ಮಗುವಿನ ಪೋಷಕರು ಮತ್ತು ದರ್ಗಾದ ಮುಖಂಡದ ವಿರುದ್ಧ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳತ್ತೇವೆ ಎಂದು ತಿಳಿಸಿದ್ದಾರೆ.

''ಖಾದ್ರಿ ದರ್ಗಾವನ್ನು ಸೀಲ್ ಮಾಡಿ ಇದರಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ. ಮುಂದಿನ ದಿನಗಳಲ್ಲಿ ಇಂತಹ ಪದ್ದತಿಯನ್ನು ತಳ ಹಂತದಿಂದ ಹೋಗಲಾಡಿಸಲು ಬೇಕಾದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತೇವೆ'' ಎಂದು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News