ನಾಲ್ಕು ಬಾರಿಯ ವರದಿಯೂ ಕೊರೋನ ನೆಗೆಟಿವ್: ಎಸೆಸೆಲ್ಸಿ ವಿದ್ಯಾರ್ಥಿ ಆಸ್ಪತ್ರೆಯಿಂದ ಬಿಡುಗಡೆ; ಚಿಕ್ಕಮಗಳೂರು ಡಿಸಿ
ಚಿಕ್ಕಮಗಳೂರು, ಜೂ.17: ಕೊರೋನ ಪಾಸಿಟಿವ್ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯ ಕೊರೋನ ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದ ಕಡೂರು ತಾಲೂಕು ಕೆ.ದಾಸರಹಳ್ಳಿ ಗ್ರಾಮದ ಎಸೆಸೆಲ್ಸಿ ವಿದ್ಯಾರ್ಥಿಯ ರಕ್ತ, ಗಂಟಲದ್ರವದ ಮಾದರಿಯನ್ನು ಮತ್ತೆ ನಾಲ್ಕು ಬಾರಿ ಪರೀಕ್ಷೆಗೊಳಪಡಿಸಲಾಗಿದೆ. ನಾಲ್ಕು ಬಾರಿಯ ಪರೀಕ್ಷೆಯಲ್ಲೂ ವಿದ್ಯಾರ್ಥಿಯ ಪ್ರಯೋಗಾಲಯದ ವರದಿ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸದ್ಯ ವಿದ್ಯಾರ್ಥಿ ಹೋಮ್ ಕ್ವಾರಂಟೈನ್‍ನಲ್ಲಿದ್ದಾನೆಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಯಲ್ಲಿ ಸೋಂಕಿನ ಲಕ್ಷಣಗಳಿದ್ದ ಹಿನ್ನೆಲೆಯಲ್ಲಿ ಆತನ ರಕ್ತ ಹಾಗೂ ಗಂಟಲದ್ರವದ ಮಾದರಿಯನ್ನು ಶಿವಮೊಗ್ಗ ನಗರದ ಕೊರೋನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಜೂ.11ರಂದು ಆತನ ಪ್ರಯೋಗಾಲಯದ ವರದಿಯಲ್ಲಿ ಪಾಸಿಟಿವ್ ಇರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ನಗರದ ಕೊರೋನ ಚಿಕಿತ್ಸಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಆತನ ರಕ್ತ, ಗಂಟಲದ್ರವದ ಮಾದರಿಯನ್ನು ನಾಲ್ಕು ಬಾರಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗೊಳಪಡಿಸಲಾಗಿದ್ದು, ನಾಲ್ಕು ಬಾರಿಯೂ ನೆಗೆಟಿವ್ ಬಂದಿರುವುದರಿಂದ ವಿದ್ಯಾರ್ಥಿಯನ್ನು ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಕೊಪ್ಪ ತಾಲೂಕಿನ ಮೂವರು ಹಾಗೂ ತರೀಕೆರೆ ತಾಲೂಕಿನ ಓರ್ವ ಸೋಂಕಿತರಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ವಿದ್ಯಾರ್ಥಿಯಿಂದ ಮೊದಲು ಸಂಗ್ರಹಿಸಿದ್ದ ರಕ್ತ, ಗಂಟಲದ್ರವದ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ಎಂದು ವರದಿ ಬಂದಿತ್ತು. ಆ ಬಳಿಕ ನಾಲ್ಕು ಬಾರಿ ಸ್ಥಳೀಯವಾಗಿ ಮಾದರಿಯನ್ನು ಪರೀಕ್ಷೆಗೊಳಪಡಿಸಿದಾಗ ನೆಗೆಟಿವ್ ಇರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಮೊದಲ ವರದಿ ಫಾಲ್ಸ್ ಪಾಸಿಟಿವ್ ಆಗಿದೆಯೇ ಅಥವಾ ಚಿಕಿತ್ಸೆಯಿಂದಾಗಿ ಕೊರೋನ ಸೋಂಕು ಗುಣವಾಗಿದೆಯೇ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕಿದೆ. ಆದ್ದರಿಂದ ವಿದ್ಯಾರ್ಥಿಯಿಂದ ಮೊದಲು ಸಂಗ್ರಹಿಸಿದ್ದ ಮಾದರಿಯನ್ನು ಮರು ಪರೀಕ್ಷೆಗೊಳಪಡಿಸಲಾಗುತ್ತಿದ್ದು, ಮಾದರಿಯನ್ನು ಬೆಂಗಳೂರಿನ ನಿಮ್ಹಾನ್ಸ್ ಗೆ ಕಳುಹಿಸಲಾಗಿದೆ. ಈ ಪ್ರಯೋಗಾಲಯದ ವರದಿ ಒಂದೆರೆಡು ದಿನಗಳಲ್ಲಿ ತಿಳಿದು ಬರಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾದ ಎಸೆಸೆಲ್ಸಿ ವಿದ್ಯಾರ್ಥಿಯ ಆರೋಗ್ಯ ಸ್ಥಿರವಾಗಿದೆ. ಆರಂಭದಲ್ಲಿ ಆತನಿಗೆ ಆಸ್ಪತ್ರೆಯಲ್ಲಿ ಪಠ್ಯ ಪುಸ್ತಕಗಳೂ ಸೇರಿದಂತೆ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗಿತ್ತು. ಆತನ ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಕೌನ್ಸಲಿಂಗ್ ಕೂಡ ಮಾಡಲಾಗಿದ್ದು, ವಿದ್ಯಾರ್ಥಿ ಎಸೆಸೆಲ್ಸಿ ಪರೀಕ್ಷೆ ಎದುರಿಸಲು ಸಮರ್ಥನಿದ್ದಾನೆ ಎಂದು ಇದೇ ವೇಳೆ ಜಿಲ್ಲಾಧಿಕಾರಿ ತಿಳಿಸಿದರು.
ನಗರದಲ್ಲಿ ಕೋವಿಡ್-19 ಪ್ರಯೋಗಾಲಯ ನಿರ್ಮಾಣ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಜುಲೈ ಮೊದಲ ವಾರ ಲ್ಯಾಬ್ ಸೇವೆಗೆ ಸಿದ್ಧವಾಗಲಿದೆ. ಸದ್ಯ ಪ್ರಯೋಗಾಲಯದ ಸಿವಿಲ್ ಕಾಮಗಾರಿಗಳು ಸೇರಿದಂತೆ ಪ್ರಯೋಗಾಲಯದ ಉಪಕರಣಗಳನ್ನು ಅಳವಡಿಸುವ ಹಾಗೂ ಸಿಬ್ಬಂದಿಗೆ ತರಬೇತಿ ಪ್ರಕ್ರಿಯೆ ನಡೆಯುತ್ತಿದೆ.
- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ