ಕೊರೋನ ಭೀತಿಯ ನಡುವೆ ಗುರುವಾರ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ

Update: 2020-06-17 14:00 GMT

ಬೆಂಗಳೂರು, ಜೂ.17: ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಮುಂದೂಡ್ಪಟ್ಟಿದ್ದ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಕೊರೋನ ಸೋಂಕಿನ ಭೀತಿಯ ನಡುವೆಯೇ ಗುರುವಾರ (ಜೂ.18) ರಾಜ್ಯಾದ್ಯಂತ ನಡೆಯುತ್ತಿದ್ದು, ಒಟ್ಟು 1,016 ಪರೀಕ್ಷಾ ಕೇಂದ್ರಗಳಲ್ಲಿ 5.95ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 

ಪದವಿ ಪೂರ್ವ ಶಿಕ್ಷಣ ಇಲಾಖೆ ಕೋವಿಡ್-19 ಸಂಬಂಧ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಪ್ರತಿ ವಿದ್ಯಾರ್ಥಿಯು ಪರೀಕ್ಷಾ ಕೊಠಡಿಗೂ ಪ್ರವೇಶಿಸುವ ಮುನ್ನ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯಗೊಳಿಸಿದೆ. ಈ ವೇಳೆ ಯಾವುದೇ ವಿದ್ಯಾರ್ಥಿಗೆ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ಆ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ವಿದ್ಯಾರ್ಥಿಯು ಮಾಸ್ಕ್ ಹಾಕಿಕೊಳ್ಳುವುದು, ಸ್ಯಾನಿಟೈಸರ್ ನಿಂದ ಕೈಯನ್ನು ಸ್ವಚ್ಛ ಮಾಡಿಕೊಳ್ಳುವುದು ಹಾಗೂ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಪರೀಕ್ಷಾ ಬರೆಯಲು ಅನುಕೂಲವಾಗುವಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪರೀಕ್ಷಾ ಕೇಂದ್ರ ಬದಲಾವಣೆ ಬಯಸಿ ಅರ್ಜಿ ಹಾಕಿರುವ ವಿದ್ಯಾರ್ಥಿಗಳಿಗೆ ಈಗಾಗಲೇ ಇಲಾಖೆಯ ಮಟ್ಟದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಇಲಾಖೆಯ ವೆಬ್‍ಸೈಟ್ www.puc.kar.nic.in ನಲ್ಲಿ ತಮ್ಮ ಹೊಸ ಪರೀಕ್ಷಾ ಕೇಂದ್ರದ ವಿವರಗಳನ್ನು ಡೌನ್‍ಲೋಡ್ ಮಾಡಿಕೊಂಡು ಒಂದು ಪ್ರತಿ ಹಾಗೂ ಈ ಹಿಂದಿನ ಪ್ರವೇಶ ಕೇಂದ್ರದ ಪ್ರವೇಶಪತ್ರದೊಂದಿಗೆ ಹೊಸ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆಯಬಹುದು.

►ಇಂಗ್ಲಿಷ್ ಪರೀಕ್ಷೆಗೆ ಒಟ್ಟು 5,95,997 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
►ಪರೀಕ್ಷೆಯು ಜೂ.18ರ ಬೆಳಗ್ಗೆ 10-15ರಿಂದ 1.30ರವರೆಗೆ ನಡೆಯಲಿದೆ.
►430 ಜಿಲ್ಲಾ ಕೇಂದ್ರಗಳು, 328 ತಾಲೂಕು ಕೇಂದ್ರ ಹಾಗೂ 258 ಹೋಬಳಿ ಕೇಂದ್ರಗಳು ಸೇರಿ ಒಟ್ಟು 1,016 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 
►ಜಿಲ್ಲೆಗಳಿಂದ ಜಿಲ್ಲೆಗಳಿಗೆ ಪರೀಕ್ಷಾ ಕೇಂದ್ರಗಳನ್ನು 18,529 ವಿದ್ಯಾರ್ಥಿಗಳು ಬದಲಾಯಿಸಿಕೊಂಡಿದ್ದಾರೆ.
►ಹೊರ ರಾಜ್ಯಗಳಿಂದ 1,889 ವಿದ್ಯಾರ್ಥಿಗಳು ಪರೀಕ್ಷೆಗೆ ಆಗಮಿಸಲಿದ್ದಾರೆ. 
►ಈ ಹಿಂದೆ ಪರೀಕ್ಷೆಗಾಗಿ 23,064 ಕೊಠಡಿಗಳನ್ನು ನಿಗಧಿಪಡಿಸಲಾಗಿತ್ತು. ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 13,528 ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. 

ಉಚಿತ ಪ್ರಯಾಣ ವ್ಯವಸ್ಥೆ
ದ್ವಿತೀಯ ಪಿಯು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹೋಗಲು ಹಾಗೂ ಪುನಃ ಮನೆಗೆ ಸುರಕ್ಷಿತವಾಗಿ ತಲುಪಲು ಅನುಕೂಲವಾಗುವಂತೆ ಸಾರಿಗೆ ಇಲಾಖೆಯಿಂದ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ತೋರಿಸಿ ಪ್ರಯಾಣ ಮಾಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News