‘ಪಶ್ಚಿಮ ಘಟ್ಟದಲ್ಲಿ ಭೂಕುಸಿತದ ಮುನ್ನೆಚ್ಚರಿಕೆ’: ತುರ್ತು ಕ್ರಮಕ್ಕೆ ಸರಕಾರಕ್ಕೆ ತಜ್ಞರ ಸಮಿತಿ ಶಿಫಾರಸ್ಸು
ಬೆಂಗಳೂರು, ಜೂ.17: ಚಿಕ್ಕಮಗಳೂರು-ಕೊಡಗು ಜಿಲ್ಲೆಗಳು ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ಭೂ ಕುಸಿತ ಆಗಬಹುದಾದ ಸೂಕ್ಷ್ಮ ಪ್ರದೇಶಗಳನ್ನು ಜಿಯೋಲೋಜಿಕಲ್ ಸರ್ವೆ ಆಫ್ ಇಂಡಿಯಾದ ವಿಜ್ಞಾನಿಗಳು ಗುರುತಿಸಿದ್ದು, ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಭಾರಿ ಮಳೆ ಬೀಳುವ ಸಂದರ್ಭವಿದೆ. ಈಗಾಗಲೆ ಭೂಕುಸಿತ ಆಗಿರುವ ಪ್ರದೇಶಗಳಲ್ಲಿ ಹಾಗೂ ವಿಜ್ಞಾನಿಗಳು ಗುರುತಿಸಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗುವ ಎಲ್ಲ ಸಾಧ್ಯತೆ ಇದೆ ಎಂದು ತಜ್ಞರ ಸಮಿತಿ ತಿಳಿಸಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಶಿಫಾರಸುಗಳನ್ನ ಸಲ್ಲಿಸಿದ ಭೂ ಕುಸಿತ ಕುರಿತ ಉನ್ನತಮಟ್ಟದ ತಜ್ಞರ ಸಮಿತಿ ಅಧ್ಯಕ್ಷ ಹಾಗೂ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ಗುಡ್ಡ-ಬೆಟ್ಟಗಳಲ್ಲಿ ಭಾರೀ ಭೂ ಕುಸಿತದಿಂದ ಕೆಳಭಾಗದಲ್ಲಿ ಬೆಟ್ಟದ ಮಧ್ಯೆ ವಾಸಿಸುವ, ವನವಾಸಿಗಳು, ರೈತರು ಪ್ರಾಣ ಕಳೆದುಕೊಳ್ಳುವ, ಭಾರಿ ಸಾವು ನೋವು ಸಂಭವಿಸುವ ಎಲ್ಲ ಸಾಧ್ಯತೆಗಳು ಇವೆ. ಕಳೆದ 2 ವರ್ಷಗಳಲ್ಲಿ ಭಾರಿ ದುರಂತಗಳು ನಡೆದಿವೆ ಎಂದರು.
ಈ ಸಂಭಾವ್ಯ ಭೂಕುಸಿತ ಪ್ರದೇಶಗಳಲ್ಲಿ ನೈಸರ್ಗಿಕ ವಿಕೋಪ ಪರಿಹಾರ/ಪುನರ್ ವಸತಿ ಹಾಗೂ ಪೂರ್ವಭಾವೀ ಸಿದ್ಧತೆಗಳು ಆಗಬೇಕು. ಭಾರೀ ಮಳೆ ಸಂದರ್ಭದಲ್ಲಿ ಈ ವನವಾಸಿಗಳು, ರೈತರ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಪೂರ್ವಭಾವೀ ಕ್ರಮ ತುರ್ತಾಗಿ ಆಗಬೇಕು. ಆಯಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾಗೃತಿ ಸಭೆ ನಡೆಸಬೇಕು. ಸ್ಥಳೀಯ ಜನರನ್ನು ತಾತ್ಕಾಲಿಕವಾಗಿ ತೆರವುಗೊಳಿಸಲೇಬೇಕಾದ ಸಂದರ್ಭ ಇದೆ ಎಂದು ಅವರು ಮನವಿ ಮಾಡಿದರು.
ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಕಾರ್ಯಾಚರಣೆಗೆ ತುರ್ತು ಮಾರ್ಗ ಸೂಚಿ ಕಳುಹಿಸಬೇಕು. ಸ್ಥಳೀಯ ಜನರನ್ನು ತೆರವುಗೊಳಿಸಲು ಕಂದಾಯ, ಅರಣ್ಯ ಇಲಾಖೆ ಪಂಚಾಯತರಾಜ್ ಇಲಾಖೆಗಳ ಸಮನ್ವಯ, ಜನಪ್ರತಿನಿಧಿಗಳ ಸಹಕಾರ ಅತ್ಯವಶ್ಯಕ. ಈ ಕುರಿತು ಮುಖ್ಯಮಂತ್ರಿ ಸಂಬಂಧಪಟ್ಟವರ ತುರ್ತು ಸಭೆ ಕರೆಯಬೇಕು ಎಂದು ಆಶೀಸರ ಮನವಿ ಮಾಡಿದ್ದಾರೆ.
ಸರಕಾರ ರಚಿಸಿರುವ ಭೂಕುಸಿತ ಅಧ್ಯಯನ ಸಮಿತಿ ಈಗಾಗಲೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭೂಕುಸಿತ ಪ್ರದೇಶಗಳಿಗೆ, ಶಿವಮೊಗ್ಗದ ಕಳಸವಳ್ಳಿ ಪ್ರದೇಶಕ್ಕೆ ಭೇಟಿ ನೀಡಿದೆ. ಜೂನ್ ಮೂರನೆ ವಾರದಲ್ಲಿ ಕೊಡಗು ಜಿಲ್ಲೆಯ ಭೂ ಕುಸಿತ ಪ್ರದೇಶಗಳ ಸಮೀಕ್ಷೆ ಮಾಡಲಿದೆ.
ತಜ್ಞರ ಸಮಿತಿಯಲ್ಲಿ ಡಾ.ಶ್ರೀನಿವಾಸರೆಡ್ಡಿ, ಡಾ.ಟಿ.ವಿ.ರಾಮಚಂದ್ರ, ಡಾ.ಮಾರುತಿ, ಡಾ.ಕೇಶವ ಕೊರ್ಸೆ ಹಾಗೂ ಅರಣ್ಯ, ಪರಿಸರ ಇಲಾಖೆ, ಗಣಿ ಭೂ ವಿಜ್ಞಾನ, ಮಾಲಿನ್ಯ ನಿಯಂತ್ರಣ ಇಲಾಖೆಗಳ ಉನ್ನತ ಅಧಿಕಾರಿಗಳು ಇದ್ದಾರೆ.