ಸಹಕಾರ ಬ್ಯಾಂಕ್‍ಗಳಿಗೆ ಒಂದೇ ಸಾಫ್ಟ್ ವೇರ್ ಅಳವಡಿಕೆ: ಸಚಿವ ಎಸ್.ಟಿ.ಸೋಮಶೇಖರ್
ಬೆಂಗಳೂರು, ಜೂ.17: ಸಹಕಾರ ಇಲಾಖೆಯ ವ್ಯಾಪ್ತಿಯೊಳಗೆ ಬರುವ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ ವಿಎಸ್‍ಎಸ್‍ಎನ್ ಸಂಘಗಳಿಗೆ ಒಂದೇ ಸಾಫ್ಟ್ ವೇರ್ ಅಳವಡಿಸಲು ಸರಕಾರದ ಅಡಿ ಬರುವ ಸಾಫ್ಟ್ ವೇರ್ ಏಜೆನ್ಸಿ ಜೊತೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೂಚನೆ ನೀಡಿದರು.
ಸಹಕಾರ ಇಲಾಖೆಯಡಿ ಬರುವ ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಿ ಒಂದೇ ಸಾಫ್ಟ್‍ವೇರ್ ಅಡಿ ತರುವ ಸಲುವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಸಭಾಂಗಣದಲ್ಲಿಂದು ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಶೀಘ್ರದಲ್ಲೆ ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ ಮತ್ತು ವಿಎಸ್‍ಎಸ್‍ಎನ್ ಸಂಘಗಳು ಸರಕಾರಿ ಸಾಫ್ಟ್‍ವೇರ್ ಏಜೆನ್ಸಿಯವರ ಜೊತೆ ಸಭೆ ಕರೆದು ಸಾಧ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಈಗಿರುವ ಎಲ್ಲ ವ್ಯವಸ್ಥೆಯನ್ನು ಹೇಗೆ ಸಾಫ್ಟ್‍ವೇರ್‍ಗೆ ಅಳವಡಿಸಬೇಕು ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಸಮಸ್ಯೆಗಳು ತಲೆದೋರದಂತೆ ಹೇಗೆ ನೋಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸಭೆ ಸೇರಿ ಈ ಬ್ಯಾಂಕ್‍ಗಳ ಅಧ್ಯಕ್ಷರು ಚರ್ಚಿಸಿ ಒಂದು ಸಹಮತಕ್ಕೆ ಬರಬೇಕು. ಇನ್ನು 15 ದಿನಗಳ ಬಳಿಕ ಮತ್ತೊಮ್ಮೆ ಸಭೆ ಸೇರೋಣ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹಾಗೂ ಸಹಕಾರ ಮಹಾಮಂಡಳದ ಅಧ್ಯಕ್ಷ ರಾಜೇಂದ್ರ ಕುಮಾರ್ ರಿಗೆ ಸೋಮಶೇಖರ್ ತಿಳಿಸಿದರು.
ಡಿಸಿಸಿ, ಅಪೆಕ್ಸ್ ಬ್ಯಾಂಕ್ ಹಾಗೂ 5 ಸಾವಿರ ಇರುವ ವಿಎಸ್‍ಎಸ್‍ಎನ್ ಬ್ಯಾಂಕ್‍ಗಳನ್ನು ಒಂದೇ ಸಾಫ್ಟ್‍ವೇರ್ ಅಡಿ ತರಬೇಕೆಂದರೆ ಸಾಧ್ಯವೇ? ಹಾಗೂ ಉಪಯೋಗ ಏನು ಎಂಬುದು ನಿಮ್ಮೆಲ್ಲರಿಗೂ ತಿಳಿದಿರಬೇಕು ಎಂದು ಸೋಮಶೇಖರ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಹೀಗೆ ಮಾಡುವುದರಿಂದ, ವಂಚನೆಗಳನ್ನು ತಪ್ಪಿಸಬಹುದಾಗಿದೆ. ಒಮ್ಮೆ ದಾಖಲೆಯನ್ನು ಅಪ್ಡೇಟ್ ಮಾಡುವುದರಿಂದ ಅದನ್ನು ಪುನಃ ತಿದ್ದುವ ಅವಕಾಶ ಇರುವುದಿಲ್ಲ. ಜೊತೆಗೆ ಯಾರು ಯಾವ ಬ್ಯಾಂಕ್ ನಲ್ಲಿ ಎಷ್ಟು ಸಾಲ ಪಡೆದಿದ್ದಾರೆಂಬ ಮಾಹಿತಿಯೂ ದೊರೆಯುತ್ತದೆ ಎಂದು ತಿಳಿಸಿದರು.
ಸಾಲಮನ್ನಾ ಸಂದರ್ಭದಲ್ಲಿ ಕಂಪ್ಯೂಟರೀಕರಣ ಮಾಡಲು ತುಂಬಾ ಕಷ್ಟವಾಗಿತ್ತು. ಪುನಃ ಡಾಟಾವನ್ನು ರೀ ಎಂಟ್ರಿ ಮಾಡುವುದಕ್ಕೆ ತುಂಬಾ ಸಮಯ ಹಾಗೂ ಸಿಬ್ಬಂದಿಯ ಕೆಲಸ ವ್ಯರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಒಂದೇ ಸಾಫ್ಟ್‍ವೇರ್ ಅವಶ್ಯಕತೆ ಇದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಮುಖ್ಯಮಂತ್ರಿಗಳ ಇ- ಆಡಳಿತ ಸಲಹೆಗಾರ ಬೇಳೂರು ಸುದರ್ಶನ್ ಮಾತನಾಡಿ, ಸರಕಾರದ ಸುಪರ್ದಿಯಲ್ಲಿ ಅನೇಕ ಸಾಫ್ಟ್‍ವೇರ್‍ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದಕ್ಕಾಗಿ ಸರಕಾರಿ ಅಧೀನದ ಸಾಫ್ಟ್‍ವೇರ್ ಏಜೆನ್ಸಿ ಇರುವುದರಿಂದ ಅದನ್ನೇ ಬಳಸಿಕೊಂಡರೆ ಹಣ ಸಂದಾಯ ಮಾಡುವ ಅವಶ್ಯಕತೆ ಇರುವುದಿಲ್ಲ. ಒಮ್ಮೆ ತಜ್ಞರ ಬಳಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಸಹಕಾರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ನಾಗಲಾಂಬಿಕಾ ದೇವಿ, ಸಹಕಾರ ಸಂಘಗಳ ನಿಬಂಧಕ ಪ್ರಸನ್ನಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.
'ಚೀನಾ ವಿರುದ್ಧ ಪರೋಕ್ಷ ಜನಸಂಗ್ರಾಮ ಮಾಡೋಣ'
ಭಾರತದ ಸೈನಿಕರನ್ನು ಮೋಸದಿಂದ ಚೀನಾ ಸೈನಿಕರು ಹತ್ಯೆ ಮಾಡಿರುವುದು ಅಕ್ಷಮ್ಯ. ಇದಕ್ಕೆ ನಮ್ಮ ಯೋಧರು ಚೀನಾದ ಸೈನಿಕರನ್ನು ಬಲಿ ಪಡೆಯುವ ಮೂಲಕ ಪ್ರತೀಕಾರ ಪಡೆದಿದ್ದಾರೆ. ಈಗ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಕಂಡುಬರುತ್ತಿದೆ. ಯುದ್ಧ ಆಗದಿರಲಿ ಎಂದು ಆಶಿಸೋಣವಾದರೂ ಚೀನಾ ತನ್ನ ಉದ್ದಟನತನವನ್ನು ಹೀಗೆಯೇ ಪ್ರದರ್ಶಿಸಿದರೆ ಭಾರತ ಕಠಿಣ ನಿಲುವು ತೆಗೆದುಕೊಳ್ಳುವುದು ಅನಿವಾರ್ಯ. ಅದೇನೇ ಇರಲಿ ಈಗ ನಾವು-ನೀವು ಚೀನಾ ವಿರುದ್ಧ ಜನಸಂಗ್ರಾಮ ಮಾಡಲು ಇದು ಸಕಾಲ. ಅದಕ್ಕೆ ಆತ್ಮನಿರ್ಭರ ಎಂಬ ಆಯುಧ ಬಳಸೋಣ.
-ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ