ಸಣ್ಣ ಹಿಡುವಳಿದಾರರಿಗೆ ಉಚಿತ ಬಿತ್ತನೆ ಬೀಜ ವಿತರಣೆಗೆ ಸಿಎಂ ಚಾಲನೆ

Update: 2020-06-17 17:35 GMT

ಬೆಂಗಳೂರು, ಜೂ.17: ಸಣ್ಣ ಹಿಡುವಳಿದಾರರಿಗೆ ಬಾಯರ್ ಕ್ರಾಪ್ ಸೈನ್ಸ್ ಲಿಮಿಟೆಡ್ ವತಿಯಿಂದ ಗುಣಮಟ್ಟದ ಬೀಜಗಳನ್ನು ಉಚಿತ ಕಿಟ್ ನೀಡಲು ಮುಂದಾಗಿರುವುದು ಸಂತಸದ ಸಂಗತಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದರು.

ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಬಿತ್ತನೆ ಬೀಜ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಣ್ಣ ಹಿಡುವಳಿದಾರರಿಗೆ ಉತ್ತಮ ಕೃಷಿ ಕೈಗೊಳ್ಳಲು ಅನುಕೂಲವಾಗುವಂತ ಉತ್ತಮ ಬೀಜಗಳು, ಉತ್ತಮ ಬೆಳೆ ಬೆಳೆಯುವ ಆಧುನಿಕ ಕೃಷಿ ಪದ್ಧತಿಯ ಮಾಹಿತಿಯನ್ನೊಳಗೊಂಡ ಬಾಯರ್ ಕಿಟ್‍ಗಳನ್ನು ಉಚಿತವಾಗಿ ವಿತರಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದರು.

ಕೋವಿಡ್-19 ಇಡೀ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದ್ದು, ರಾಜ್ಯದ ಕೃಷಿಯ ಮೇಲೆಯೂ ತನ್ನ ಪ್ರಭಾವವನ್ನು ಬೀರುತ್ತಿದೆ. ರೈತರು ಹಾಗೂ ಸಣ್ಣ ಹಿಡುವಳಿದಾರರು ತಮ್ಮ ಬೆಳೆಗಳ ಕೊಯ್ಲೋತ್ತರ ಮತ್ತು ಕೃಷಿ ಭೂಮಿ ನಿರ್ವಹಣೆಗಾಗಿ ವಲಸೆ ಕಾರ್ಮಿಕರ ಮೇಲೆ ಅವಲಂಬಿತರಾಗಿದ್ದು, ಕೋವಿಡ್-19ನ ಪರಿಸ್ಥಿತಿಯಲ್ಲಿ ತಮ್ಮ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲಾಗದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅವರು ಹೇಳಿದರು.

ಈ ಸನ್ನಿವೇಶದಲ್ಲಿ ರೈತರು ತಮ್ಮ ಕುಟುಂಬ, ಕೃಷಿ, ಪಶುಸಂಗೋಪನೆಗಳ ನಿರ್ವಹಣೆಯನ್ನು ನಡೆಸುವುದು ಕಷ್ಟವಾಗಿದೆ. ಕೋವಿಡ್-19ನ ಸಂಕಷ್ಟದಿಂದ ರಾಜ್ಯದ ಎಲ್ಲ ವರ್ಗದ ಜನರು ಹೊರಬರಲು ರಾಜ್ಯ ಸರಕಾರ 2,284 ಕೋಟಿ ರೂ.ಗಳ ಪರಿಹಾರದ ಪ್ಯಾಕೇಜ್‍ನ್ನು ಘೋಷಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ರೈತರ ಸಂಕಷ್ಟಕ್ಕೆ ಸ್ಪಂದಿಸಿ ಎಲ್ಲ ರೀತಿಯ ಬೆಂಬಲ ನೀಡಲು ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. 2020-21ನೆ ಸಾಲಿನಲ್ಲಿ 47.81 ಲಕ್ಷ ರೈತರಿಗೆ 2000 ರೂ.ಗಳಂತೆ ಒಟ್ಟು 956.32 ಕೋಟಿ ರೂ.ವರ್ಗಾಯಿಸಲಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರದ ಪಿ.ಎಂ. ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರಕಾರದಿಂದ  ನೀಡುವ 4 ಸಾವಿರ ರೂ.ಗಳ ಪೈಕಿ 2 ಸಾವಿರ ರೂ.ಗಳ ಎರಡನೇ ಕಂತನ್ನು 50 ಲಕ್ಷ ರೈತರ ಖಾತೆಗೆ ಒಟ್ಟು 1,000 ಕೋಟಿ ರೂ. ಜಮೆ ಮಡಲಾಗುತ್ತಿದೆ. ಕೋವಿಡ್-19 ರ ಸಂದರ್ಭದಲ್ಲಿ ಸಂಷ್ಟಕ್ಕೀಡಾಗಿರುವ ರೈತರಿಗೆ ಬೆಂಬಲ ನೀಡುವ ಸಲುವಾಗಿ 12,735 ಹೆಕ್ಟೇರ್ ವಿಸ್ತೀರ್ಣದಲ್ಲಿ ಹೂವುಗಳನ್ನು ಬೆಳೆದ ರೈತರಿಗೆ ಒಂದು ಹೆಕ್ಟೇರ್‍ಗೆ 25 ಸಾವಿರ ರೂ. ಗಳ ಪರಿಹಾರ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ರೈತ ಸಂಪರ್ಕ ಕೇಂದ್ರ ಯಂತ್ರೋಪಕರಣಗಳ ಸೇವಾ ಕೇಂದ್ರ, ಕೃಷಿ ಪರಿಕರ ಮಾರಾಟ ಕೇಂದ್ರಗಳನ್ನು ತೆರೆಯುವ ಮೂಲಕ ಮುಂಗಾರು ಹಂಗಾಮಿನ ಚಟುವಟಿಕೆಗಳಿಗೆ ಪೂರಕ ವ್ಯವಸ್ಥೆ ಮಾಡಲಾಗಿದೆ. ಹಾಪ್‍ಕಾಮ್ಸ್ ಮೂಲಕ ಹಣ್ಣು, ತರಕಾರಿ  ಮಾರಾಟಕ್ಕೆ ವ್ಯವಸ್ಥೆ ಹಾಗೂ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು.

ಸಂಸ್ಥೆಯ ಈ ಉಪಕ್ರಮದಿಂದ  ಸಣ್ಣ ರೈತರು ಕಡಿಮೆ ವೆಚ್ಚದಲ್ಲಿ ಉತ್ತಮ ಬೆಳೆಗಳನ್ನು ಬೆಳೆಯುವ ಮೂಲಕ ತಮ್ಮ ಜೀವನ ಮಟ್ಟವನ್ನು ಸುಧಾರಿಸಲು ಅನುಕೂಲವಾಗಲಿದೆ. ಸಾರ್ವಜನಿಕ ಹಿತಾಸಕ್ತಿ ಹೊಂದಿದ ಖಾಸಗಿ ಸಂಸ್ಥೆಗಳು ರೈತರ ಬದುಕನ್ನು ಹಸನು ಮಾಡುವ ಸತ್ಕಾರ್ಯದಲ್ಲಿ ಸರಕಾರದೊಂದಿಗೆ ಕೈ ಜೋಡಿಸಲು ಮುಂದಾಗುವಂತೆ ಮುಖ್ಯಮಂತ್ರಿ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News