ನನ್ನನ್ನು ರಾಜಕೀಯವಾಗಿ ಮುಗಿಸುವ ಸಂಚು: ಮುತ್ತಯ್ಯ ಆರೋಪ

Update: 2020-06-17 18:06 GMT

ಚಿಕ್ಕಮಗಳೂರು, ಜೂ.17: ನಗರದ ಬಸವನಹಳ್ಳಿ ಕೆರೆಯ ಮಧ್ಯೆ ಸ್ವಾಮಿ ವಿವೇಕಾನಂದ ಮೂರ್ತಿ ನಿರ್ಮಾಣದ ವಿಚಾರದಲ್ಲಿ ತನ್ನ ಜೊತೆಗಿದ್ದವರೇ ನನ್ನನ್ನು ರಾಜಕೀಯ ವಾಗಿ ಮುಗಿಸುವ ಸಂಚು ಮಾಡಿದ್ದಾರೆ ಎಂದು ನಗರಸಬೆ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಎನ್.ಮುತ್ತಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ತಿ ನಿರ್ಮಾಣದ ಗುತ್ತಿಗೆ ಪಡೆದವರು ಹಣ ಪಡೆದು ವಂಚನೆ ಮಾಡಿದ್ದಾರೆ. ಈ ಬಗ್ಗೆ ಪೋಲಿಸರಿಗೂ ದೂರು ನೀಡಿದ್ದೇನೆ. ಆದರೆ, ಮೂರ್ತಿ ನಿರ್ಮಾಣದ ವಿಚಾರದಲ್ಲಿ ಆರಂಭದಲ್ಲಿ ತನ್ನಜೊತೆಗಿದ್ದವರೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ತೇಜೋವಧೆ ಮಾಡುತ್ತಿದ್ದಾರೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ನೋವಾಗಿದೆ ಎಂದು ಹೇಳಿದರು.

ಮೂರ್ತಿ ನಿರ್ಮಾಣ ಕಾಮಗಾರಿಗೆ ಇದುವರೆಗೂ 30 ಲಕ್ಷ ರೂ. ಹಣ ಖರ್ಚಾಗಿದೆ. ಶಿಲ್ಪಿಗಳು ಮಾಡಿದ ವಂಚನೆಯಿಂದಾಗಿ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆಯೇ ಹೊರತು ನಾನು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಆದರೆ, ಇದೀಗ ಅಪೂರ್ಣಗೊಂಡ ಮೂರ್ತಿಯ ವಿಚಾರವನ್ನು ಮುನ್ನಲೆಗೆ ತಂದು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ವಿರುದ್ಧ ಅವಹೇಳನಕಾರಿಯಾಗಿ ನಿಂದಿಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಿ.ಎಂ. ಕೌಶಿಕ್, ಮಹೇಶ್ ಶೆಟ್ಟಿ, ಮೋಹನ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News