ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಜೈಲ್ ಭರೋ ಚಳವಳಿ: ಸಿದ್ದರಾಮಯ್ಯ
ಬೆಂಗಳೂರು, ಜೂ. 18: `ರಾಜ್ಯ ಸರಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಒಂದು ಕರಾಳ ಶಾಸನವಾಗಲಿದೆ. ಇದರ ವಿರುದ್ಧ ಕಾಂಗ್ರೆಸ್ ರಾಜ್ಯವ್ಯಾಪಿ ಹೋರಾಟ ನಡೆಸಲಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಜೈಲ್ ಭರೋ ಚಳವಳಿ ನಡೆಸಲಾಗುವುದು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, `ಕಚ್ಛಾ ತೈಲ ಬೆಲೆ ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆ ನಿತ್ಯ ಏರಿಕೆಯಾಗುತ್ತಿದೆ. ಸದಸ್ಯ ಪೆಟ್ರೋಲ್, ಡೀಸೆಲ್ ಲೀಡರ್ ಗೆ 25ರಿಂದ 30 ರೂ.ಇರಬೇಕಿತ್ತು. ಕೇಂದ್ರ ಸರಕಾರ ಪದೇ ಪದೇ ದರ ಏರಿಕೆ ಮಾಡುವ ಮೂಲಕ ಮಧ್ಯಮ ವರ್ಗದ ಜನರನ್ನು ಬಲಿ ಹಾಕುತ್ತಿದೆ' ಎಂದು ದೂರಿದ್ದಾರೆ.
'ಪ್ರಧಾನಿ ಮೌನ ಸಲ್ಲ': ಚೀನಾದೊಂದಿಗೆ ನಡೆದ ಘರ್ಷಣೆಯಲ್ಲಿ ನಮ್ಮ ದೇಶದ ಯೋಧರು ಹುತಾತ್ಮರಾಗಿದ್ದಾರೆ. ಯೋಧರ ಶೌರ್ಯ, ತ್ಯಾಗ, ಬಲಿದಾನ ಸದಾ ಸ್ಮರಣೀಯ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ನಮ್ಮ ಸೇನೆ ಅತ್ಯಂತ ಶಕ್ತಿಶಾಲಿಯಾಗಿದೆ. ಆದರೆ, ಗಡಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪ್ರಧಾನಿ ಮೋದಿಯವರ ಮೌನ ಸರಿಯಲ್ಲ ಎಂದು ಸಿದ್ದರಾಮಯ್ಯ ತನ್ನ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸಿದರು.
ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಜು.2ಕ್ಕೆ ನಿಗದಿಯಾಗಿದ್ದು, ಸಿದ್ದತೆಯೂ ನಡೆಯುತ್ತಿದೆ. ಆಯಾ ಕ್ಷೇತ್ರಗಳ ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳು ಅಗತ್ಯ ತಯಾರಿ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಎಲ್ಲ ಶಾಸಕರಿಗೆ ಸೂಚನೆ ನೀಡಿದರು.
'ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಆಯ್ಕೆಯಾದ ಬಿ.ಕೆ.ಹರಿಪ್ರಸಾದ್ ಮತ್ತು ನಸೀರ್ ಅಹಮದ್ ಅವರಿಗೆ ಅಭಿನಂದನೆಗಳು. ಅವರನ್ನು ಆಯ್ಕೆ ಮಾಡಿದ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಕೃತಜ್ಞತೆಗಳು'
-ಸಿದ್ದರಾಮಯ್ಯ, ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ