ಚಿಕ್ಕಮಗಳೂರು: ಗೊಂದಲಗಳಿಲ್ಲದೇ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ
ಚಿಕ್ಕಮಗಳೂರು, ಜೂ.18: ಕೊರೋನ ಲಾಕ್ ಡೌನ್ ನಿಂದಾಗಿ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯದ ಪರೀಕ್ಷೆ ಜಿಲ್ಲೆಯಲ್ಲಿ ಯಾವುದೇ ಗೊಂದಲವಿಲ್ಲದೇ ಯಶಸ್ವಿಯಾಗಿ ನಡೆದಿದೆ. ಗುರುವಾರ ಹೊರ ಜಿಲ್ಲೆಗಳ 1300 ವಿದ್ಯಾರ್ಥಿಗಳೂ ಸೇರಿದಂತೆ ಜಿಲ್ಲೆಯಲ್ಲಿ 10,019 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 377 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಕೊರೋನ ಆತಂಕದ ನಡುವೆ ಗುರುವಾರ ಜಿಲ್ಲೆಯಲ್ಲಿ ನಡೆದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನು ಸಮರ್ಥವಾಗಿ ನಡೆಸುವಲ್ಲಿ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ 10,019 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ. 377 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆ ಬರೆಯಲು ಜಿಲ್ಲೆಯ 9,986 ವಿದ್ಯಾರ್ಥಿಗಳು ಸೇರಿದಂತೆ ಹೊರ ಜಿಲ್ಲೆಯ 1,300 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಜಿಲ್ಲೆಯ 112 ವಿದ್ಯಾರ್ಥಿಗಳು ಹೊರ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು. ಆದರೆ ವಿದ್ಯಾರ್ಥಿ ಯಾವ ಪರೀಕ್ಷಾ ಕೇಂದ್ರದಲ್ಲಿ ಬೇಕಾದರೂ ಪರೀಕ್ಷೆಯನ್ನು ಬರೆಯಬಹುದು ಎಂದು ಆದೇಶಿಸಿದ್ದರಿಂದ ಗುರುವಾರ ಹೊರ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಮುಂದಾಗಿದ್ದ 112 ವಿದ್ಯಾರ್ಥಿಗಳು ಜಿಲ್ಲೆಯಲ್ಲೇ ಪರೀಕ್ಷೆ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಒಟ್ಟು 10,019 ಪಿಯುಸಿ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಇಂಗ್ಲೀಷ್ ಪರೀಕ್ಷೆ ಬರೆದಂತಾಗಿದೆ.
ಚಿಕ್ಕಮಗಳೂರು ನಗರದಲ್ಲಿ-5, ಕಡೂರು ಪಟ್ಟಣದಲ್ಲಿ-2, ಬೀರೂರು ಪಟ್ಟಣದಲ್ಲಿ-1, ಕಡೂರು ತಾಲ್ಲೂಕು ದೇವನೂರಿನಲ್ಲಿ-1, ಅಜ್ಜಂಪುರ-1, ತರೀಕೆರೆ ಪಟ್ಟಣದಲ್ಲಿ-2, ಎನ್.ಆರ್.ಪುರ-1, ಕೊಪ್ಪ ಪಟ್ಟಣದಲ್ಲಿ-1, ಶೃಂಗೇರಿ-1, ಬಾಳೆಹೊನ್ನೂರು-1, ಕಳಸ-1 ಹಾಗೂ ಮೂಡಿಗೆರೆ ಪಟ್ಟಣದಲ್ಲಿನ 1 ಪರೀಕ್ಷಾ ಕೇಂದ್ರದಲ್ಲಿ ಗುರುವಾರ ಪಿಯುಸಿ ಪರೀಕ್ಷೆ ನಡೆದಿದ್ದು, ಗುರುವಾರ ಬೆಳಗ್ಗೆ 7:30ರಿಂದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ಆರಂಭಿಸಿದ್ದರು.
ಪರೀಕ್ಷಾ ಕೇಂದ್ರಕ್ಕೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೇಂದ್ರದ ಮುಂದೇ ಇರಿಸಲಾಗಿದ್ದ ಸ್ಯಾನಿಟೈಸರ್ ಹಾಗೂ ಸೋಪನ್ನು ಬಳಿಸಿ ಕೈ ಶುಚಿಗೊಳಿಸಿಕೊಂಡ ನಂತರ ಥರ್ಮಲ್ ಸ್ಕ್ಯಾನರ್ ಮೂಲಕ ದೇಹದ ಉಂಷ್ಣಾಂಶ ಪರೀಕ್ಷಿಸಿ ಪರೀಕ್ಷಾ ಕೇಂದ್ರದೊಳಗೆ ಬಿಡಲಾಗುತ್ತಿತ್ತು. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಥರ್ಮಲ್ ಸ್ಕ್ಯಾನರ್‍ನಲ್ಲಿ ಪರೀಕ್ಷೆಗೆ ಒಳಪಟ್ಟ ನಂತರವೇ ಪರೀಕ್ಷಾ ಕೊಠಡಿಗೆ ತೆರಳಿದರು.
ಹೊರ ಜಿಲ್ಲೆಗಳಿಂದ ಗುರುವಾರ ಬೆಳಗ್ಗೆಯೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದು, ಅವರನ್ನು ಥರ್ಮಲ್ ಸ್ಕ್ಯಾನಿಂಗ್‍ಗೆ ಒಳಪಡಿಸಿ, ಸ್ಯಾನಿಟೈಸರ್ ಹಾಗೂ ಮಾಸ್ಕ್ ಧರಿಸಿದ ನಂತರವೇ ಪರೀಕ್ಷಾ ಕೇಂದ್ರದ ಒಳಬಿಡಲಾಯಿತು. ಪ್ರತೀ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಮಾಸ್ಕ್ ಧರಿಸಿಯೇ ಪರೀಕ್ಷೆ ಬರೆದರು.
ಜಿಲ್ಲೆಯಲ್ಲಿ ತೆರೆಯಲಾಗಿದ್ದ ಪ್ರತೀ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೂ ಮುನ್ನ ರಾಸಾಯನಿಕ ಬಳಸಿ ಸ್ವಚ್ಛಗೊಳಿಸಲಾಗಿತ್ತು. ಪರೀಕ್ಷಾ ಕೇಂದ್ರದಲ್ಲಿ 600ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಸಣ್ಣ ಕೊಠಡಿಗಳಲ್ಲಿ 16 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಒಂದು ಡೆಸ್ಕ್‍ನಿಂದ ಮತ್ತೊಂದು ಡೆಸ್ಕ್ ಒಂದೂವರೆ ಮೀ. ಅಂತರ ಕಾಯ್ದುಕೊಂಡು ಸಾಮಾಜಿಕ ಅಂತರ ಪಾಲನೆಯೊಂದಿಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ದೂರದ ಹಾಗೂ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಉಚಿತ ಬಸ್ ಸೌಲಭ್ಯವನ್ನು ಕೆಎಸ್ಸಾರ್ಟಿಸಿ ವತಿಯಿಂದ ಕಲ್ಪಿಸಲಾಗಿತ್ತು. ರೂಟ್ ಬಸ್‍ಗಳಲ್ಲಿ ಪರೀಕ್ಷಾರ್ಥಿಗಳು ಉಚಿತ ಸಂಚಾರಕ್ಕೆ ಅವಕಾಶವನ್ನು ಜಿಲ್ಲಾಡಳಿತ ಕಲ್ಪಿಸಲಾಗಿತ್ತು. ಇನ್ನು ಕೆಎಸ್ಸಾರ್ಟಿಸಿ ಬಸ್ ಸಂಚಾರವಿಲ್ಲದ ಭಾಗಗಳಿಗೆ ಖಾಸಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಕೊಪ್ಪ ತಾಲೂಕು ಕಮ್ಮರಡಿಯಿಂದ ಕೊಪ್ಪ ಹಾಗೂ ಕಮ್ಮರಡಿಯಿಂದ ಶೃಂಗೇರಿ ಪರೀಕ್ಷಾ ಕೇಂದ್ರಗಳಿಗೆ ಎರಡು ಖಾಸಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಕಡೂರು ತಾಲೂಕು ಬಿ.ಎನ್.ಕೊಪ್ಪಲು ಭಾಗದ ವಿದ್ಯಾರ್ಥಿಗಳಿಂದ ಖಾಸಗಿ ಬಸ್ ಸೌಲಭ್ಯ ನೀಡುವಂತೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಕಡೂರು ಹಾಗೂ ಬೀರೂರು ಪರೀಕ್ಷಾ ಕೇಂದ್ರದ 13 ವಿದ್ಯಾರ್ಥಿಗಳಿಗೆ ಬಿಜಿಎಸ್ ಕಾಲೇಜು ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಗುರುವಾರ ಬೆಳಿಗ್ಗೆಯೇ ಪರೀಕ್ಷಾ ಕೇಂದ್ರಗಳಿಗೆ ಧಾವಿಸಿ ಪರೀಕ್ಷೆ ಬರೆಯುವ ಪ್ರತಿಯೊಬ್ಬ ವಿದ್ಯಾರ್ಥಿ ಸ್ಯಾನಿಟೈಸರ್ ಬಳಕೆ ಮಾಡುವಂತೆ ಮಾಸ್ಕ್ ಧರಿಸುವಂತೆ ಎಚ್ಚರವಹಿಸಿದರು. ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯ ದೇಹದ ಉಷ್ಣಾಂಶವನ್ನು ಪರೀಕ್ಷಿಸಿದ ನಂತರವೇ ಪರೀಕ್ಷಾ ಕೇಂದ್ರ ಒಳಪ್ರವೇಶಿಸಲು ಅವಕಾಶ ಕಲ್ಪಿಸಿದರು.
ಜಿಲ್ಲೆಯ 18 ಪರೀಕ್ಷಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ಗುರುವಾರ ಪರೀಕ್ಷೆ ನಡೆದಿದೆ. ಡಿಬಾರ್‍ನಂತಹ ಪ್ರಕರಣಗಳು ಯಾವ ಕೇಂದ್ರದಲ್ಲೂ ನಡೆದಿಲ್ಲ. ಜಿಲ್ಲೆಯಲ್ಲಿ 10,019 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ನಗರಸಭೆ ಸಹಕಾರದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರೀಕ್ಷೆ ನಡೆಸಲು ಸಾಧ್ಯವಾಗಿದೆ. ಗುರುವಾರ 377 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.
-ಕೆ.ನಾಗರಾಜ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ