×
Ad

ವಿಧಾನಪರಿಷತ್ ಚುನಾವಣೆ: ಎಂಟಿಬಿ, ಶಂಕರ್, ಹರಿಪ್ರಸಾದ್, ನಸೀರ್ ಅಹಮದ್ ಸೇರಿ 8 ಮಂದಿ ನಾಮಪತ್ರ ಸಲ್ಲಿಕೆ

Update: 2020-06-18 19:52 IST

ಬೆಂಗಳೂರು, ಜೂ. 18: ವಿಧಾನಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಇದೇ ತಿಂಗಳ 29ರಂದು ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಆಡಳಿತಾರೂಢ ಬಿಜೆಪಿಯ ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ, ಪ್ರತಾಪ್ ಸಿಂಹ ನಾಯಕ್, ಕಾಂಗ್ರೆಸ್ ಪಕ್ಷದ ಬಿ.ಕೆ.ಹರಿಪ್ರಸಾದ್, ನಸೀರ್ ಅಹಮದ್ ಮತ್ತು ಜೆಡಿಎಸ್‍ನಿಂದ ಉದ್ಯಮಿ ಇಂಚರ ಗೋವಿಂದರಾಜು, ಪಕ್ಷೇತರ ಅಭ್ಯರ್ಥಿಯಾಗಿ ಯಡವನಹಳ್ಳಿ ಕೃಷ್ಣೇಗೌಡ ನಾಮಪತ್ರ ಸಲ್ಲಿಸಿದ್ದಾರೆ.

ಗುರುವಾರ ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ, ಪ್ರತಾಪ್ ಸಿಂಹ ನಾಯಕ್, ಬಿ.ಕೆ.ಹರಿಪ್ರಸಾದ್, ನಸೀರ್ ಅಹಮದ್ ಮತ್ತು ಇಂಚರ ಗೋವಿಂದರಾಜು, ಪಕ್ಷೇತರ ಅಭ್ಯರ್ಥಿಯಾಗಿ ಯಡವನಹಳ್ಳಿ ಕೃಷ್ಣೇಗೌಡ ಅವರು ನಾಮಪತ್ರ ಸಲ್ಲಿಕೆ ಮಾಡಿದರು.

ಮೊದಲಿಗೆ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ, ಪ್ರತಾಪ್ ಸಿಂಹ ನಾಯಕ್ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಂದ ಬಿ ಫಾರಂ ಪಡೆದುಕೊಂಡರು. ನಾಮಪತ್ರ ಸಲ್ಲಿಕೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಶಾಸಕ ಅರವಿಂದ ಲಿಂಬಾವಳಿ ಸಾಥ್ ನೀಡಿದರು.

ಅತ್ತ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೂ ಮೊದಲು ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಲಾಯಿತು. ಈ ವೇಳೆ ಅಭ್ಯರ್ಥಿಗಳ ನಾಮಪತ್ರಕ್ಕೆ ಶಾಸಕರಿಂದ ಸಹಿ ಹಾಕಿಸಲಾಯಿತು. ಬಳಿಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಮುಖಂಡರೊಂದಿಗೆ ಆಗಮಿಸಿದ ಬಿ.ಕೆ.ಹರಿಪ್ರಸಾದ್, ನಸೀರ್ ಅಹಮದ್ ಅವರು ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.

ಕೊನೆಯ ಕ್ಷಣದಲ್ಲಿ ಜೆಡಿಎಸ್‍ನ ಅಚ್ಚರಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕೋಲಾರ ಮೂಲದ ಉದ್ಯಮಿ ಇಂಚರ ಗೋವಿಂದರಾಜು ಅವರು ನಾಮಪತ್ರ ಸಲ್ಲಿಸಿದರು. ಈ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ, ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಬಸವರಾಜ ಹೊರಟ್ಟಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.

ನಸೀರ್ ಅಹ್ಮದ್, ಜಯಮ್ಮ, ಎಂ.ಸಿ.ವೇಣುಗೋಪಾಲ್, ಎನ್.ಎಸ್.ಭೋಸರಾಜು, ಎಚ್.ಎಂ. ರೇವಣ್ಣ, ಟಿ.ಎ.ಸರವಣ ಹಾಗೂ ಡಿ.ಯು.ಮಲ್ಲಿಕಾರ್ಜುನ್ ಇವರುಗಳ ಅವಧಿ ಇದೇ ತಿಂಗಳ 30ಕ್ಕೆ ನಿವೃತ್ತರಾಗಲಿದ್ದು, ಅವರ ನಿವೃತ್ತಿಯಿಂದ ತೆರವಾಗಲಿರುವ ಏಳು ಸ್ಥಾನಗಳಿಗೆ ಜೂ.29ಕ್ಕೆ ಚುನಾವಣೆ ನಡೆಯಲಿದೆ.

ಅವಿರೋಧ ಆಯ್ಕೆ ಸಾಧ್ಯತೆ: ಪರಿಷತ್ತಿನ ಏಳು ಸ್ಥಾನಗಳಿಗೆ ಪಕ್ಷೇತರ ಅಭ್ಯರ್ಥಿ ಸೇರಿ ಒಟ್ಟು ಎಂಟು ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದು, ನಾಳೆ(ಜೂ.19) ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜೂ.22 ಕೊನೆಯ ದಿನವಾಗಿದೆ. ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ-4, ಕಾಂಗ್ರೆಸ್-2 ಹಾಗೂ ಜೆಡಿಎಸ್-1 ಸ್ಥಾನ ಗೆಲ್ಲಲು ಅವಕಾಶವಿದೆ. ಹೀಗಾಗಿ ಮೂರು ರಾಜಕೀಯ ಪಕ್ಷಗಳು ತಮ್ಮ ಗೆಲುವು ಸಾಧ್ಯವಿರುವ ಅಭ್ಯರ್ಥಿಗಳನ್ನಷ್ಟೇ ಕಣಕ್ಕಿಳಿಸಿವೆ.

ಪಕ್ಷೇತರ ಅಭ್ಯರ್ಥಿ ನಾಮಪತ್ರಕ್ಕೆ ಶಾಸಕರ ಸಹಿ ಹಾಕದಿರುವ ಕಾರಣ ನಾಮಪತ್ರ ಪರಿಶೀಲನೆ ವೇಳೆ ಅವರ ಉಮೇದುವಾರಿಕೆ ತಿರಸ್ಕೃತವಾಗಿವ ಸಾಧ್ಯತೆಗಳಿವೆ. ಹೀಗಾಗಿ ಕಣದಲ್ಲಿ ಏಳು ಮಂದಿಯಷ್ಟೇ ಉಳಿಯಲಿದ್ದು, ರಾಜ್ಯಸಭಾ ಮಾದರಿಯಲ್ಲೆ ಮೇಲ್ಮನೆಗೂ ಚುನಾವಣೆ ಇಲ್ಲದೆ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಳವಾಗಿದೆ.

`ಜನರ ವಿಶ್ವಾಸದಿಂದ ಪಕ್ಷೇತರ ಶಾಸಕನಾಗಿ ಆಯ್ಕೆಯಾಗಿದ್ದ ನಾನು ಒಂದು ಪಕ್ಷವನ್ನು ಅಧಿಕಾರಕ್ಕೆ ತರಲು ನನ್ನ ಸ್ಥಾನವನ್ನು ಧಾರೆ ಎರೆದೆ. ಜನರ ಸೇವೆ ಮಾಡಲು ಮೇಲ್ಮನೆ ಮೂಲಕ ನನಗೆ ಅವಕಾಶ ಸಿಕ್ಕಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ'
-ಆರ್.ಶಂಕರ್ ಮಾಜಿ ಸಚಿವ, ಬಿಜೆಪಿ ಮೇಲ್ಮನೆ ಅಭ್ಯರ್ಥಿ

`ಮೇಲ್ಮನೆ ಅಭ್ಯರ್ಥಿಗಳಾಗಿ ಆಯ್ಕೆಯಾಗಿರುವ ಬಿ.ಕೆ.ಹರಿಪ್ರಸಾದ್ ಮತ್ತು ನಸೀರ್ ಅಹಮದ್ ಅವರು ಪಕ್ಷದ ಕಾರ್ಯಕರ್ತರು. ಹಿರಿಯರ ಮನೆಗೆ ಹಿರಿಯರ ಅವಶ್ಯಕತೆ ಇದೆ. ಹೀಗಾಗಿ ಪಕ್ಷ ಅವರಿಗೆ ಟಿಕೆಟ್ ಕೊಟ್ಟಿದೆ. ರಾಜ್ಯಸಭೆಯಲ್ಲೂ ಇದೇ ಕಾರಣದಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್ ವರಿಷ್ಟ ದೇವೇಗೌಡ ಅವರನ್ನು ಕಳುಹಿಸಲಾಗಿದೆ'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News