ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡರೂ ನೀವೇ ಹೊಣೆ: ಜೆಡಿಎಸ್ ಶಾಸಕರ ವಿರುದ್ಧ ಸಂಸದೆ ಸುಮಲತಾ ಗುಡುಗು

Update: 2020-06-18 14:46 GMT

ಮಂಡ್ಯ, ಜೂ.18: ಮೈಷುಗರ್ ಕಾರ್ಖಾನೆ ಸರಕಾರಿ ಸ್ವಾಮ್ಯದಲ್ಲೇ ಆರಂಭವಾಗಬೇಂಬ ಜಿಲ್ಲೆಯ ಜೆಡಿಎಸ್ ಶಾಸಕರ ನಿಲುವಿಗೆ ಸಂಸದೆ ಸುಮಲತಾ ಅಂಬರೀಷ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಒಬ್ಬನೇ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡರೂ ಅದಕ್ಕೆ ನೀವೇ ಹೊಣೆ ಎಂದು ಗುಡುಗಿದ್ದಾರೆ.

ಒ ಅಂಡ್ ಎಂ ಸೂತ್ರದಲ್ಲಿ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ಗುರುವಾರ ನಡೆದ ಧರಣಿಗೆ ಬೆಂಬಲ ನೀಡಿ ಮಾತನಾಡಿದ ಅವರು, ನಿಮ್ಮ ಕಾಳಜಿ ರೈತರ ಪರ ಇಲ್ಲ, ನಿಮ್ಮದು ಉಗ್ರ ಹೋರಾಟ ಅಲ್ಲ. ನಿಮ್ಮದು ಸ್ವಾರ್ಥದ ಹೋರಾಟ. ಇದು ಎಲ್ಲರಿಗೂ ಸ್ಪಷ್ಟವಾಗಿದೆ. ಮೈಷುಗರ್ ಪ್ರಾರಂಭವಾದರೆ ಖಾಸಗೀ ಕಾರ್ಖಾನೆಗಳಿಗೆ ನಷ್ಟವಾಗಬಹುದು ಎಂಬ ಉದ್ದೇಶ ನಿಮಗೆ ಇರಬಹುದು. ಆದರೆ, ಜಿಲ್ಲೆಯ ಜನರು ಮೂರ್ಖರಲ್ಲ. ಅವರೆಂದೂ ಇಂತಹ ವಿಚಾರದಲ್ಲಿ ಮೋಸ ಹೋಗುವುದಿಲ್ಲ ಎಂದು ಅವರು ಹೇಳಿದರು.

ನಿಮ್ಮ ಸರಕಾರದ ಸಿಎಂ ಕಳೆದ ಜುಲೈನಲ್ಲಿ 69 ಕೋಟಿ ರೂ. ಮೀಸಲಿಟ್ಟು ಒ ಅಂಡ್ ಎಂ ಸೂತ್ರದಡಿ ಕಾರ್ಖಾನೆ ನಡೆಸಲು ತೀರ್ಮಾನಿಸಿದಾಗ ಹೋರಾಟ ಮಾಡದ ನೀವು ಇಂದಿನ ಸರಕಾರದ ವಿರುದ್ಧ ಹೋರಾಟ ಮಾಡುತ್ತಿರುವುದೇಕೆ? ಎಂದೂ ಅವರು ತರಾಟೆಗೆ ತೆಗೆದುಕೊಂಡರು.

ಸರಕಾರಗಳು ಕೊಟ್ಟ ಹಣದಿಂದ ಕಾರ್ಖಾನೆ ಆರಂಭವಾಗಲಿಲ್ಲ. ಊಹೆ ಮಾಡದಷ್ಟು ಭ್ರಷ್ಟಾಚಾರ ನಡೆದಿದೆ. ಈಗಲೂ ರೈತರಿಗೆ ಅನುಕೂಲವಾಗುವುದಿಲ್ಲ. ಈ ರೀತಿಯಾದರೂ ಮತ್ತೆ ಸರಕಾರವೇ ನಡೆಸಬೇಕೆನ್ನುವುದರಲ್ಲಿ ಅರ್ಥವಿಲ್ಲ ಎಂದು ಅವರು ಪ್ರತಿಪಾದಿಸಿದರು.

ಇಷ್ಟು ವರ್ಷ ಕಾರ್ಖಾನೆ ಬೀಗ ಹಾಕಿದ್ದರೂ ಒಂದೂ ಪ್ರತಿಭಟನೆ ಮಾಡದವರು ಈಗ ಕಾರ್ಖಾನೆ ಪ್ರಾರಂಭವಾಗುವಾಗ ಹೋರಾಟಕ್ಕೆ ನಿಂತಿರುವುದೇಕೆ? ಎಷ್ಟು ವರ್ಷ ಹೀಗೆ ಮಾಡುತ್ತಾರೆ? ಯಾವ ಸ್ವಾರ್ಥದಿಂದ ಮಾಡುತ್ತಿದ್ದಾರೆ? ಉತ್ತರ ಕೊಡಬೇಕು ಎಂದು ಅವರು ಹೇಳಿದರು.

ಕಾರ್ಖಾನೆಯನ್ನು ಸರಕಾರವೇ ನಡೆಸಬೇಕೆಂದು ಪಟ್ಟುಹಿಡಿದಿರುವವರು ಸರಕಾರಕ್ಕೆ ಬೆದರಿಕೆ ಹಾಕುವುದಕ್ಕೆ ಮತ್ತು ಜನರನ್ನು ದಾರಿ ತಪ್ಪಿಸುವುದಕ್ಕೆ ಹೋಗಬೇಡಿ ಎಂದು ಅವರು ಸಲಹೆ ನೀಡಿದರು.

ಸಿನಿಮಾ ರಂಗದ ನನ್ನ ಹಿತೈಷಿಗಳಿಗೆ ಕಾರ್ಖಾನೆ ಮೇಲೆ ಕಣ್ಣಿದೆ ಎಂಬುದಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ರೈತರಿಗಾಗಿ ಸಚಿವ ಸ್ಥಾನ ತ್ಯಾಗ ಮಾಡಿದವರ ಕುಟುಂಬದಿಂದ ಬಂದವಳು ನಾನು. ಈ ರೀತಿಯ ಅಪಾದನೆಗಳಿಂದ ಅವರೇ ಗೌರವ ಕಳೆದುಕೊಳ್ಳುತ್ತಾರೆ.
-ಸುಮಲತಾ ಅಂಬರೀಷ್, ಸಂಸದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News