ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಮೊದಲ ಬಲಿ
ಚಿಕ್ಕಮಗಳೂರು, ಜೂ.18: ಕಾಫಿನಾಡಿನಲ್ಲಿ ಕೊರೋನ ಸೋಂಕು ಮೊದಲ ಬಲಿ ಪಡೆದಿದೆ. ಗುರುವಾರ ಜಿಲ್ಲೆಯಲ್ಲಿ ಪತ್ತೆಯಾಗಿದ್ದ ಮೂವರು ಕೊರೋನ ಸೋಂಕಿತರ ಪೈಕಿ ಅಜ್ಜಂಪುರ ಪಟ್ಟಣದ 72 ವರ್ಷದ ವೃದ್ಧೆ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೋನ ಸೋಂಕಿತ ಪಟ್ಟಿ ಮತ್ತೆ ಹೆಚ್ಚುತ್ತಿರುವುದರ ಮಧ್ಯೆ ಗುರುವಾರ ಸೋಂಕಿಗೆ ತುತ್ತಾಗಿದ್ದ 72 ವರ್ಷದ ವೃದ್ಧೆ ಕೋವಿಡ್ ಚಿಕಿತ್ಸಾ ಘಟಕದಲ್ಲಿ ಮೃತಪಟ್ಟಿದ್ದಾರೆ. ಈ ವೃದ್ಧೆ ಜಿಲ್ಲೆಯ ಅಜ್ಜಂಪುರ ಪಟ್ಟಣದವರಾಗಿದ್ದು, ಇತ್ತೀಚೆಗೆ ಕೊರೋನಾ ಹಾಟ್‍ಸ್ಪಾಟ್ ಆಗಿರುವ ದಾವಣಗೆರೆ ಜಿಲ್ಲೆಯಲ್ಲಿರುವ ತನ್ನ ಮಗಳ ಮನೆಗೆ ಭೇಟಿ ನೀಡಿ ಅಜ್ಜಂಪುರಕ್ಕೆ ಹಿಂದಿರುಗಿದ್ದರೆಂದು ತಿಳಿದು ಬಂದಿದೆ.
ಹೀಗೆ ಹಿಂದಿರುಗಿದ್ದ ವೃದ್ಧೆಯಲ್ಲಿ ಕಳೆದ ಸೋಮವಾರ ಮೂತ್ರ ಪಿಂಡದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಅಜ್ಜಂಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೃದ್ಧೆಯಲ್ಲಿ ಜ್ವರ ಕಾಣಿಸಿಕೊಂಡಿದ್ದರಿಂದ ಕೊರೋನ ಪರೀಕ್ಷೆಗೊಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಪಾಸಿಟಿವ್ ಇದ್ದ ಹಿನ್ನೆಲೆಯಲ್ಲಿ ವೃದ್ಧೆಯನ್ನು ಬುಧವಾರ ಸಂಜೆ ಚಿಕ್ಕಮಗಳೂರು ನಗರದಲ್ಲಿರುವ ಕೊರೋನ ಚಿಕಿತ್ಸಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಗುರುವಾರ ಬೆಳಗ್ಗೆ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ವೃದ್ಧೆಯ ಪ್ರಕರಣ ಹೊರತು ಪಡಿಸಿ ಜಿಲ್ಲೆಯಲ್ಲಿ ಗುರುವಾರ ಮತ್ತೆರೆಡು ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಇದೇ ವೇಳೆ ತಿಳಿಸಿದ್ದು, ಈ ಎರಡೂ ಪಾಸಿಟಿವ್ ಪ್ರಕರಣಗಳು ಮಹಾರಾಷ್ಟ್ರದಿಂದ ಇತ್ತೀಚೆಗೆ ಹಿಂದಿರುಗಿದ್ದ ಹಾಗೂ ಕೊರೋನ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಯೊಬ್ಬರ ಪ್ರಾಥಮಿಕ ಸಂಪರ್ಕಗಳಾಗಿವೆ ಎಂದು ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಜು.16ರಂದು 4 ಪ್ರಕರಣಗಳು ಪತ್ತೆಯಾಗಿದ್ದು, ಗುರುವಾರ ಪತ್ತೆಯಾದ ಮೂರು ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 7ಕ್ಕೇರಿದ್ದು, ಈ ಪೈಕಿ ಸೋಂಕಿಗೊಳಗಾಗಿದ್ದ ಓರ್ವ ವೃದ್ಧೆ ಗುರುವಾರ ಮೃತಪಟ್ಟಿದ್ದಾರೆ.