×
Ad

ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷರಾಗಿ ನ್ಯಾ.ಸುಭಾಷ್ ಅಡಿ ನೇಮಕ

Update: 2020-06-18 21:54 IST

ಬೆಂಗಳೂರು, ಜೂ. 18: ವೈದ್ಯಕೀಯ ಕೋರ್ಸ್ ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷರನ್ನಾಗಿ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಸುಭಾಷ್ ಬಿ. ಅಡಿ ಅವರನ್ನು ವೈದ್ಯಕೀಯ ಕೋರ್ಸ್‍ಗಳ ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಉನ್ನತ ಶಿಕ್ಷಣ ಅಧೀನ ಕಾರ್ಯದರ್ಶಿ ಜಿ.ಎಂ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ವೃತ್ತಿ ಪರ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಶುಲ್ಕ ನಿರ್ಧಾರ) ಕಾಯ್ದೆಯಡಿ ರಚಿಸಲಾಗಿರುವ ಸಮಿತಿಗೆ ಒಂದು ವರ್ಷದವರೆಗೆ ಅಥವಾ ಮುಂದಿನ ಸೂಚನೆ ಬರುವವರೆಗೂ ಸುಭಾಷ್ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‍ಗಳ ಶುಲ್ಕ ಹೆಚ್ಚಳ ಕುರಿತಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ವೇಳೆ ಶುಲ್ಕ ಹೆಚ್ಚಳ ಕುರಿತಂತೆ ಮಾಹಿತಿ ಒದಗಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು.

ಹುಬ್ಬಳ್ಳಿಯ ದಿ. ಜಿ.ಬಿ. ಕುಲಕರ್ಣಿ ಸ್ಮಾರಕ ಕಾನೂನು ಸಂಸ್ಥೆ ಅಧ್ಯಕ್ಷ ಡಾ. ವಿನೋದ್ ಕುಲಕರ್ಣಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾಯಮೂರ್ತಿ ನಟರಾಜ್ ರಂಗಸ್ವಾಮಿ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News