ಮನೆಬಾಗಿಲಿಗೆ ಪಶು ಆಸ್ಪತ್ರೆ ಸೇವಾ ಸೌಲಭ್ಯ ಕಲ್ಪಿಸಲು ಚಿಂತನೆ
ಬೆಂಗಳೂರು, ಜೂ.18: ರೈತರ ಮನೆ ಬಾಗಿಲಿಗೆ ಪಶು ಆಸ್ಪತ್ರೆಯ ಸೇವಾ ಸೌಲಭ್ಯವನ್ನು ಒದಗಿಸಲು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಮುಂದಾಗಿದ್ದಾರೆ.
ರೈತರು ಪಶುಗಳ ಚಿಕಿತ್ಸೆಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಪಶು ವೈದ್ಯರ ಕೊರತೆಯಿಂದ ಸಕಾಲದಲ್ಲಿ ವೈದ್ಯರುಗಳು ರೈತರ ಮನೆಗಳಿಗೆ ತೆರಳಿ ಪಶುಗಳಿಗೆ ಚಿಕಿತ್ಸೆ ನೀಡಲು ವಿಳಂಬವಾಗುತ್ತಿರುವುದು, ಜತೆಗೆ ವೆಚ್ಚವೂ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಂಚಾರಿ ಪಶು ಚಿಕಿತ್ಸಾ ವಾಹವನ್ನು ಆರಂಭಿಸಲು ನಿರ್ಧರಿಸಲಾಗಿದೆ. ಸದ್ಯದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಪಶು ಚಿಕಿತ್ಸಾ ವಾಹನ (ಆಂಬುಲೆನ್ಸ್) ಲೋಕಾರ್ಪಣೆ ಮಾಡುವರು ಎಂದು ಸಚಿವ ಪ್ರಭು ಚೌವ್ಹಾಣ್ ಹೇಳಿದ್ದಾರೆ.
ರಾಜ್ಯದಲ್ಲಿ ಮೊದಲ ಬಾರಿಗೆ ಈ ಪಶು ಚಿಕಿತ್ಸಾ ವಾಹನ ಸೌಲಭ್ಯವನ್ನು ಜಾರಿ ಮಾಡಲಾಗುತ್ತಿದ್ದು, ಇದರಿಂದ ಜಾನುವಾರುಗಳ ರಕ್ಷಣೆ ಆಗಲಿದೆ. ರೈತರ ಕರೆಗಳಿಗೆ ಸ್ಪಂದಿಸಿ ಈ ಪಶು ಚಿಕಿತ್ಸಾ ವಾಹನ ರೈತರ ಮನೆ ಬಾಗಿಲಿಗೆ ತೆರಳಲಿದೆ ಎಂದು ತಿಳಿಸಿದ್ದಾರೆ.
ಈ ಪಶು ಚಿಕಿತ್ಸಾ ವಾಹನದಲ್ಲಿ ಶಸ್ತ್ರಚಿಕಿತ್ಸಾ ಘಟಕ, ಪ್ರಯೋಗ ಶಾಲೆ, ಸ್ಕ್ಯಾನಿಂಗ್ ಸೇರಿದಂತೆ ಔಷಧಿ ಸಲಕರಣೆಗಳು ಇರಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.