ಟಿಕೆಟ್ ಕೈ ತಪ್ಪಿದ್ದರಿಂದ ಹತಾಶನಾಗಲ್ಲ: ವಿಶ್ವನಾಥ್

Update: 2020-06-18 18:08 GMT

ಬೆಂಗಳೂರು, ಜೂ 18: ನನಗೆ ಟಿಕೆಟ್ ತಪ್ಪಿದೆ ಎಂಬುದು ತಿಳಿಯದ ಸಂಗತಿಯಾದರೂ, ಇದರಿಂದ ನಾನೇನು ಹತಾಶನಾಗುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಇನ್ನೂ ಭರವಸೆಯಿದೆ ಎಂದು ಮಾಜಿ ಶಾಸಕ ಎಚ್.ವಿಶ್ವನಾಥ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಸಿಗದೇ ಇರುವುದರಿಂದ ನಾನೇನು ಹತಾಶನಾಗುವುದಿಲ್ಲ. ತ್ಯಾಗಕ್ಕೆ ತಕ್ಕ ಪ್ರತಿಫಲ ಸಿಗುವುದೆಂಬ ಸಿದ್ಧಾಂತ ನಂಬಿದವನು ನಾನು. ಹಾಗೆಯೇ ಸಿಎಂ ಮೇಲೆ ಇನ್ನೂ ವಿಶ್ವಾಸವಿದೆ. ಅಲ್ಲದೆ, ನಾನೂ ಬಿಜೆಪಿ ಪಕ್ಷಕ್ಕೆ ಹೊಸಬ ಎಂದು ತಿಳಿಸಿದರು.

ಬಿಜೆಪಿಯ ಆಳ ಅಗಲ ನನಗೆ ತಿಳಿದಿಲ್ಲ. ನನ್ನ ಜೊತೆ ಬಂದವರೆಲ್ಲ ಈಜಿ ದಡ ಸೇರಿದ್ದಾರೆ. ಆದರೆ ನಾನು ಮಾತ್ರ ಇನ್ನು ಸೇರಿಲ್ಲ. ಹಿಂದುಳಿದ ವರ್ಗದ ಹಿರಿಯ ನಾಯಕನಾಗಿರುವ ನನಗೆ ಟಿಕೆಟ್ ಏಕೆ ನೀಡಿಲ್ಲ ಎಂಬುದು ತಿಳಿದಿಲ್ಲ. ಇದರಿಂದ ನೋವಾಗಿದ್ದರೂ ಪ್ರತಿಕ್ರಿಯಿಸಲಾರೆ ಎಂದರು.

ರಾಜ್ಯದ ನಾಯಕರು ನಾಲ್ಕು ಜನರ ಹೆಸರನ್ನು ಅಂತಿಮಗೊಳಿಸಿ ದಿಲ್ಲಿಗೆ ಕಳುಹಿಸಿದ್ದರು. ಆದರೆ ಇದೀಗ ನನ್ನ ಹೆಸರನ್ನು ಕೈ ಬಿಡಲಾಗಿದೆ. ಕಡೆಗಳಿಗೆಯವರೆಗೂ ಯಡಿಯೂರಪ್ಪ ನನ್ನ ಪರವಾಗಿ ಪ್ರಯತ್ನ ಮಾಡಿದ್ದಾರೆ. ಆದರೆ, ದಿಲ್ಲಿಯಲ್ಲಿ ನನಗೆ ಟಿಕೆಟ್ ತಪ್ಪಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ತಿಳಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸಿಯೇ ಈ ಹಂತಕ್ಕೆ ಬಂದಿದ್ದೇನೆ. ನನಗೆ ಇದು ಹೊಸತೇನು ಅಲ್ಲ. ರಾಜಕೀಯದಲ್ಲಿ ಇಂತಹ ಸಂಕಷ್ಟಗಳು ಎದುರಾಗುವುದು ಸಹಜ. ಸಿಎಂ ಯಡಿಯೂರಪ್ಪ ಮೇಲೆ ಈಗಲೂ ನಂಬಿಕೆ ಇದೆ. ಸ್ವಲ್ಪ ಸಮಯದವರೆಗೆ ಕಾದು ನೋಡೋಣ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನನ್ನ ಧ್ವನಿ ಅಡಗಲಿಕ್ಕೆ ಸಾಧ್ಯವಿಲ್ಲ. ಜೊತೆಗೆ ಯಾರಿಂದಲೂ ಅಡಗಿಸಲು ಸಾಧ್ಯವಿಲ್ಲ. ವಿಶ್ವನಾಥ್ ಧ್ವನಿ ಯಾವಾಗಲೂ ಮಾರ್ಧನಿಸುತ್ತಲೇ ಇರುತ್ತದೆ. ಕಾಲ ಕೂಡಿ ಬಂದಾಗ ತಕ್ಕ ಉತ್ತರ ನೀಡುವೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News