ಬಿಎಸ್‌ವೈ ಸರಕಾರದಲ್ಲಿ ಸಚಿವ ಆಗಲ್ಲ, ಸಮಯ ಬಂದಾಗ ಸಿಡಿದೇಳುತ್ತೇನೆ: ಶಾಸಕ ಯತ್ನಾಳ್

Update: 2020-06-19 13:45 GMT

ಬೆಂಗಳೂರು, ಜೂ. 19: `ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ನಾನು ಸಚಿವನಾಗಲು ಬಯಸುವುದಿಲ್ಲ, ಇದು ನನ್ನ ಸಿದ್ಧಾಂತ. ಸಮಯ ಬಂದಾಗ ಸಿಡಿದೇಳುತ್ತೇನೆ' ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇಂದಿಲ್ಲಿ ರಾಜ್ಯ ಸರಕಾರದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಯಾವಾಗ ಬಗ್ಗಬೇಕು, ಯಾವಾಗ ಸೆಟೆದು ನಿಲ್ಲಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತು. ಕಾಲಾಯ ತಸ್ಮೈ ನಮಃ, ಯಾವಾಗ ಹೇಗೆ ಇರಬೇಕು ಹಾಗೆಯೇ ಇರಬೇಕು ಎಂದು ತಮ್ಮದೆ ದಾಟಿಯಲ್ಲೆ ಸರಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.

ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನನಗೆ ತೀವ್ರ ಅಸಮಾಧಾನವಿದೆ. ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಯಾರಿಗೆ ವಿಷಯ ಮುಟ್ಟಿಸಬೇಕೋ ಅವರಿಗೆ ಮುಟ್ಟಿಸುತ್ತೇನೆ. ನಾನು ಸುಮ್ಮನಿದ್ದೇನೆ ಎಂದು ಯಾರೂ ತಿಳಿದುಕೊಳ್ಳುವುದು ಬೇಡ. ಇದೀಗ ನಾನು ತಲೆ ತಗ್ಗಿಸಿದ್ದೇನೆ ಎಂದರೆ ಒಳ್ಳೆಯದಾಗುತ್ತದೆ ಎಂದೇ ಅರ್ಥ ಎಂದು ಯತ್ನಾಳ್ ಪ್ರತಿಕ್ರಿಯೆ ನೀಡಿದರು.

ಅಧಿಕಾರಿಗಳ ವರ್ಗಾವಣೆ ಬಗ್ಗೆ ಚರ್ಚೆ ಮಾಡಿರುವುದು ಸತ್ಯ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಸಂಬಂಧಿಸಿದಂತೆ ನನಗೆ ಬೇಸರವಿದೆ. ಅದನ್ನು ಹೊರತುಪಡಿಸಿದರೆ ನಾಯಕತ್ವ ಬದಲಾವಣೆಯನ್ನು ನಾನು ಬಯಸುವುದಿಲ್ಲ. ಇನ್ನೂ ಸಚಿವ ಸ್ಥಾನಕ್ಕೂ ನಾನು ಲಾಬಿ ಮಾಡುವವನೋ ಅಲ್ಲ. ಕ್ಷೇತ್ರಕ್ಕೆ ಅನುದಾನ ಸಿಗುವುದೋ ಇಲ್ಲವೋ ತಿಳಿಯದು. ಆದರೆ, ಈ ವಿಷಯ ಎಲ್ಲಿಗೆ ಮುಟ್ಟಿಸಬೇಕೋ ಅಲ್ಲಿಗೆ ಮುಟ್ಟಿಸಿಯೇ ತೀರುತ್ತೇನೆ ಎಂದು ಹೇಳಿದರು.

ಪಕ್ಷದ ನಾಯಕರೆಲ್ಲರೂ ಒಟ್ಟಿಗೆ ಸೇರಿ ಊಟ ಮಾಡಿದ್ದೇವೆ. ಅಲ್ಲಿ ಸುಡುಗಾಡು ಹರಟೆ ಹೊಡೆದಿರುತ್ತೇವೆ. ಅದನ್ನು ಭಿನ್ನಮತರ ಸಭೆ ಎನ್ನುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಅನುದಾನದ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.

ಮಾರಕ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರಕಾರ ಬಹಳ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆ ಸಲ್ಲಿಸಲೇಬೇಕು'

-ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News