ಕೊರೋನ ಕೋಲಾಹಲ: ರಾಜ್ಯದಲ್ಲಿ ಸಾವಿನ ಸಂಖ್ಯೆ 124ಕ್ಕೆ ಏರಿಕೆ, ಮತ್ತೆ 337 ಮಂದಿಗೆ ಸೋಂಕು ದೃಢ

Update: 2020-06-19 14:03 GMT

ಬೆಂಗಳೂರು, ಜೂ.19: ಕರ್ನಾಟಕದಲ್ಲಿ ಒಂದೇ ದಿನ ಮತ್ತೆ 337 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 8,281ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಏಳು, ಬೀದರ್ ನಲ್ಲಿ ಎರಡು ಮತ್ತು ವಿಜಯಪುರ ಜಿಲ್ಲೆಯಲ್ಲಿ ಒಂದು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 124ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಗುರುವಾರ ಸಂಜೆ 5 ಗಂಟೆಯಿಂದ ಶುಕ್ರವಾರ ಸಂಜೆ 5 ಗಂಟೆವರೆಗೆ ಹತ್ತು ಸಾವು, 337 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಸಾವಿನ ಸರಣಿ ಮುಂದುವರಿದಿದ್ದು, ಇಂದು ಒಂದೇ ದಿನ ಏಳು ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯ 72 ವರ್ಷದ ಪುರುಷ, 78 ವರ್ಷದ ಪುರುಷ, 65 ವರ್ಷದ ಮಹಿಳೆ, 58 ವರ್ಷದ ಪುರುಷ, 50 ವರ್ಷದ ಪುರುಷ, 54 ವರ್ಷದ ಪುರುಷ ಮತ್ತು 69 ವರ್ಷದ ಪುರುಷರೊಬ್ಬರು ಮೃತಪಟ್ಟಿದ್ದಾರೆ. ಬೀದರ್ ಜಿಲ್ಲೆಯಲ್ಲಿ 70 ಮತ್ತು 45 ವರ್ಷದ ಪುರುಷರಿಬ್ಬರು ಸೋಂಕಿಗೆ ಬಲಿಯಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ 66 ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 138, ಕಲಬುರಗಿ 52, ಬಳ್ಳಾರಿ 37, ಹಾಸನ 18, ದಕ್ಷಿಣ ಕನ್ನಡ 13, ದಾವಣಗೆರೆ 12, ಉಡುಪಿ 11, ಬೀದರ್ 10, ಮೈಸೂರು 6, ಕೊಪ್ಪಳ 6, ಯಾದಗಿರಿ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ತಲಾ 4, ಮಂಡ್ಯ, ಧಾರವಾಡ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಬಾಗಲಕೋಟೆಯಲ್ಲಿ ತಲಾ 3, ಚಿಕ್ಕಮಗಳೂರು, ತುಮಕೂರಿನಲ್ಲಿ ತಲಾ 2, ಬೆಳಗಾವಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗದಲ್ಲಿ ತಲಾ 1 ಪ್ರಕರಣ ಪಾಸಿಟಿವ್ ಬಂದಿದೆ.

ಒಟ್ಟಾರೆ ರಾಜ್ಯದಲ್ಲಿ 8,281 ಕೊರೋನ ಸೋಂಕಿತರ ಪೈಕಿ 5,210 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 230 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 124 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 2,943 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News