×
Ad

ಕೊರೋನ ನಿಯಂತ್ರಣಕ್ಕೆ ಬರದಿದ್ದರೆ ಜಿಂದಾಲ್ ಕಂಪೆನಿ ಸಂಪೂರ್ಣ ಬಂದ್: ಸಚಿವ ಆನಂದ್‍ ಸಿಂಗ್

Update: 2020-06-19 20:38 IST

ಬಳ್ಳಾರಿ, ಜೂ.2: ಬಳ್ಳಾರಿ ಜಿಲ್ಲೆಯ ಜಿಂದಾಲ್‍ನಲ್ಲಿ ಕೊರೋನ ಪ್ರಕರಣಗಳು ಪ್ರತಿ ದಿನ ಹೆಚ್ಚಾಗುತ್ತಿದ್ದು, ಕೊರೋನ ನಿಯಂತ್ರಣಕ್ಕೆ ಬರದಿದ್ದರೆ ಜಿಂದಾಲ್ ಕಂಪೆನಿಯನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಇಲಾಖೆ ಖಾತೆ ಸಚಿವ ಆನಂದ್‍ ಸಿಂಗ್ ಹೇಳಿದ್ದಾರೆ.  

ಶುಕ್ರವಾರ ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್‍ನಲ್ಲಿ ಕೊರೋನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಈಗಾಗಲೇ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಆದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆ ತುರ್ತು ಸಭೆ ಕರೆಯಲಾಗಿದೆ. ಜಿಂದಾಲ್ ಮುಖ್ಯಸ್ಥ ವಿನೋದ್ ನಾವೆಲ್ ಸಭೆಗೆ ಆಗಮಿಸಲಿದ್ದಾರೆ ಎಂದು ಆನಂದ್‍ ಸಿಂಗ್ ತಿಳಿಸಿದರು.

ದೇಶ ಲಾಕ್‍ಡೌನ್ ಮಾಡಿದಾಗಲೂ ಜಿಂದಾಲ್‍ಗೆ ಅವಕಾಶ ನೀಡಿದ್ದೇವೆ. ಹೀಗಾಗಿ, ಜನ ನಮ್ಮ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ, ಸರಕಾರ ಅಗತ್ಯ ಬಿದ್ದರೆ ಜಿಂದಾಲ್ ಸಂಪೂರ್ಣ ಬಂದ್ ಮಾಡಲು ಸಿದ್ಧವಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News