13 ಸಾವಿರ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ: ಸಚಿವ ಎಸ್.ಟಿ.ಸೋಮಶೇಖರ್

Update: 2020-06-19 17:11 GMT

ಬಳ್ಳಾರಿ, ಜೂ.19: ರಾಜ್ಯದಲ್ಲಿ 42 ಸಾವಿರ ಆಶಾ ಕಾರ್ಯಕರ್ತೆಯರಿದ್ದು, ಅವರಲ್ಲಿ 13 ಸಾವಿರ ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ ತಲಾ 3 ಸಾವಿರ ರೂ.ಗಳಂತೆ ಪ್ರೋತ್ಸಾಹ ಧನ ವಿತರಿಸಲಾಗಿದೆ. ಉಳಿದವರಿಗೂ ನೀಡಲು ಕ್ರಮ ವಹಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಶುಕ್ರವಾರ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಸಹಕಾರ ಇಲಾಖೆ ಮತ್ತು ಸಹಕಾರ ಸಂಘಗಳ/ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಸಾಂಕೇತಿಕವಾಗಿ 110 ಮಂದಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಿಸಿ ಅವರು ಮಾತನಾಡಿದರು.

ಕೋವಿಡ್-19ನ ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಬಿಸಿಲು-ಮಳೆಯನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದು, ಕೋವಿಡ್ ನಿಯಂತ್ರಣದಲ್ಲಿ ಅವರ ಪಾಲು ಬಹಳ ದೊಡ್ಡದಿದೆ. ಇವರ ಕಾರ್ಯವನ್ನು ಮನಗಂಡು ಮುಖ್ಯಮಂತ್ರಿಯು ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಿ ನೈತಿಕ ಆತ್ಮಸ್ಥೈರ್ಯ ತುಂಬಲು ಸೂಚಿಸಿದ್ದರಿಂದ ರಾಜ್ಯದಲ್ಲಿರುವ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ.ಗಳಂತೆ ಪ್ರೋತ್ಸಾಹಧನ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬಳ್ಳಾರಿ ಜಿಲ್ಲೆಯಲ್ಲಿ 2050 ಆಶಾ ಕಾರ್ಯಕರ್ತೆಯರಿದ್ದು, ಅವರಿಗೆ 61.50ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಈಗಾಗಲೇ 1146 ಆಶಾ ಕಾರ್ಯಕರ್ತೆಯರಿಗೆ 34.38 ಲಕ್ಷ ರೂ.ಪ್ರೋತ್ಸಾಹ ಧನ ವಿತರಿಸಲಾಗಿದೆ. ಉಳಿದವರಿಗೂ ಶೀಘ್ರವೆ ಪ್ರೋತ್ಸಾಹ ಧನ ವಿತರಿಸಲಾಗುವುದು ಎಂದು ಸೋಮಶೇಖರ್ ತಿಳಿಸಿದರು.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮಾತನಾಡಿ, ಆಶಾ ಕಾರ್ಯಕರ್ತೆಯರು ಸಲ್ಲಿಸುತ್ತಿರುವ ಸೇವೆಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದೇವೆಯೇ ಹೊರತು ಅವರಿಗೆ ಈ ರೀತಿಯ ಪ್ರೋತ್ಸಾಹ ವಿಚಾರಿಸುವ ಆಲೋಚನೆ ಮಾಡಿರಲಿಲ್ಲ. ಸಹಕಾರ ಸಚಿವ ಸೋಮಶೇಖರ್ ಈ ವಿಷಯವನ್ನು ಕ್ಯಾಬಿನೆಟ್‍ನಲ್ಲಿ ಪ್ರಸ್ತಾಪಿಸಿ ಜಾರಿಗೆ ತಂದಿದ್ದಾರೆ ಎಂದರು.

ಪ್ರಕೃತಿ ಉಳಿಸಿದರೆ ಮಾತ್ರವೇ ನಮಗೆ ಉಳಿಗಾಲ, ಪ್ರಕೃತಿ ಮುನಿಸಿಕೊಂಡರೆ ಅದರ ಪರಿಣಾಮವೇನು ಎಂಬುದನ್ನು ಕೊರೋನ ಮುಖಾಂತರ ಅನಾವರಣಗೊಂಡಿದೆ. ಇದನ್ನು ನಾವೆಲ್ಲರು ಗಮನದಲ್ಲಿಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಪ್ರಕೃತಿ ಉಳಿಸಿ ಬೆಳೆಸುವುದಕ್ಕೆ ನಾವೆಲ್ಲರು ಮುಂದಾಗಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಸಹಕಾರ ಸಂಘಗಳ ಉಪನಿಬಂಧಕಿ ಡಾ.ಸುನೀತಾ ಸಿದ್ರಾಮ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ರಾಜಶ್ರೀ ಅಗಸರ್, ಸಹಕಾರ ಸಂಘಗಳ ಜಂಟಿ ನಿಬಂಧಕ ಗೋಪಾಲ್ ಚವ್ಹಾಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News