ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿದ ರಾಜ್ಯ ಸರಕಾರ: ಎಸ್‍ಡಿಪಿಐ ಆರೋಪ
ಬೆಂಗಳೂರು, ಜೂ.19: ಕೊರೋನ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುವ ನೆಪವೊಡ್ಡಿ ಖಾಸಗಿ ಆಸ್ಪತ್ರೆಗಳ ಮಾಲಕರ ಲಾಬಿಗೆ ಮಣಿದು ಚಿಕಿತ್ಸೆ ದರವನ್ನು ಅತಿ ಹೆಚ್ಚು ನಿಗದಿ ಪಡಿಸಿ ಚಿಕಿತ್ಸೆ ಎಂಬ ಹೆಸರಿನಲ್ಲಿ ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟಿರುವ ರಾಜ್ಯ ಸರಕಾರದ ನಿರ್ಧಾರ ಆಘಾತಕಾರಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಲಾಕ್ ಡೌನ್‍ನಿಂದಾಗಿ ಜನಸಾಮಾನ್ಯರ ಜೀವನ ಅಸ್ತವ್ಯಸ್ತವಾಗಿದೆ. ಕೆಲಸವೂ ವ್ಯಾಪಾರವೂ ಇಲ್ಲದೆ ಆರ್ಥಿಕ ಸಂಕಷ್ಟದಿಂದ ಜನರು ತೊಳಲಾಡುತ್ತಿರುವ ಇಂತಹ ಸಂದಿಗ್ಧ ದುಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳ ಮಾಲಕರ ಹಿತಾಸಕ್ತಿಗಾಗಿ ಅತ್ಯಂತ ದುಬಾರಿ ಚಿಕಿತ್ಸಾ ದರವನ್ನು ನಿಗದಿಪಡಿಸಿರುವುದು ಸರಕಾರ ಮಾಡಿರುವ ಅಕ್ಷಮ್ಯ ಅಪರಾಧವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಸ್ಥಿತಿ ನೆಲಕಚ್ಚಿದ ಈಗಿನ ಸಂದರ್ಭದಲ್ಲಿ ಬಡ ಹಾಗೂ ಕೆಳಮಧ್ಯಮ ವರ್ಗದ ಜನತೆ ಇಷ್ಟೊಂದು ದುಬಾರಿ ಚಿಕಿತ್ಸಾ ದರವನ್ನು ಭರಿಸುವುದು ಹೇಗೆ ಎಂದು ಸರಕಾರ ವಿವರಿಸುವುದಿಲ್ಲ. ಜನಸಾಮಾನ್ಯರ ಕುರಿತು ಕಿಂಚಿತ್ತೂ ಯೋಚಿಸದೆ ಕೇವಲ ವ್ಯಾಪಾರಿ ಮನೋಭಾವನೆಯಿಂದ ಮಾಡಿರುವ ಈ ನಿರ್ಧಾರ ತೀರಾ ತಪ್ಪು ಹೆಜ್ಜೆಯಾಗಿದೆ ಎಂದು ಇಲ್ಯಾಸ್ ಮುಹಮ್ಮದ್ ತಿಳಿಸಿದ್ದಾರೆ.
ಉತ್ತಮ ವೈದ್ಯಕೀಯ ಚಿಕಿತ್ಸೆಯು ಕೇವಲ ಶ್ರೀಮಂತರಿಗೆ ಮಾತ್ರ ದೊರೆಯಲಿ ಎಂಬುದು ಸರಕಾರದ ನಿಲುವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಜನ ವಿರೋಧಿ ಆದೇಶವನ್ನು ಸರಕಾರ ಕೂಡಲೇ ಹಿಂಪಡೆಯುವಂತೆ ಎಸ್‍ಡಿಪಿಐ ಆಗ್ರಹಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.