3 ತಿಂಗಳಲ್ಲೇ ಸಹಕಾರ ಇಲಾಖೆಯ ಮಹತ್ವ ತೋರಿಸಿಕೊಟ್ಟ ಸೋಮಶೇಖರ್: ಎಚ್.ಕೆ.ಪಾಟೀಲ್ ಮೆಚ್ಚುಗೆ

Update: 2020-06-20 12:32 GMT

ಗದಗ, ಜೂ. 20: ಮಾರಕ ಕೊರೋನ ಸೋಂಕಿನ ಸಂದರ್ಭದಲ್ಲಿಯೂ ಜಿಲ್ಲಾ ಪ್ರವಾಸ ಮಾಡುತ್ತಾ, ರಚನಾತ್ಮಕ ಕಾರ್ಯಗಳ ಮೂಲಕ ನಾಗರಿಕರನ್ನು ಪ್ರೋತ್ಸಾಹಿಸುವ ಕೆಲಸವನ್ನು ಸಹಕಾರ ಸಚಿವ ಸೋಮಶೇಖರ್ ಅವರು ಮಾಡುತ್ತಿದ್ದಾರೆ. ಅಧಿಕಾರ ವಹಿಸಿಕೊಂಡ 3 ತಿಂಗಳಲ್ಲಿ ಇಲಾಖೆ ಮಹತ್ವವನ್ನು ಜನರಿಗೆ ತೋರಿಸಿಕೊಟ್ಟಿದ್ದಾರೆಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶನಿವಾರ ಸಹಕಾರ ಇಲಾಖೆಯಿಂದ ಏರ್ಪಡಿಸಿದ್ದ ಕೊರೋನ ವಾರಿಯರ್ಸ್ ಆಗಿರುವ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ, ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಒಬ್ಬ ಮಂತ್ರಿ ಸಹಕಾರಿಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋದರೆ ಹೇಗೆ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಸಹಕಾರ ಇಲಾಖೆಯ ವ್ಯಾಪ್ತಿಯೊಳಗೆ ಬರುವ ಲಾಭ ಗಳಿಸಿದ ಸಹಕಾರ ಸಂಸ್ಥೆಗಳು ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ಕೊಡಬೇಕೇಂದು ಆದೇಶ ನೀಡಿ ಸಹಕಾರ ಇಲಾಖೆ ಹೀಗೂ ಮಾಡಬಹುದು ಎಂದು ಸೂಚಿಸಿದರು. ಒಟ್ಟು 52 ಕೋಟಿ ರೂ.ಗಳಷ್ಟು ದೇಣಿಗೆಯನ್ನು ಸಿಎಂ ಪರಿಹಾರ ನಿಧಿಗೆ ಸಂಗ್ರಹಿಸಿಕೊಟ್ಟ ಖ್ಯಾತಿ ಸಚಿವ ಸೋಮಶೇಖರ್ ಅವರಿಗೆ ಸಲ್ಲಬೇಕು ಎಂದು ಪಾಟೀಲ್ ಹೊಗಳಿದರು.

ಲಾಕ್‍ಡೌನ್ ಘೋಷಣೆ ಮಾಡಿದ ಬಳಿಕ ಎಲ್ಲರೂ ಮನೆಯಲ್ಲಿ ಬಾಗಿಲು ಹಾಕಿ ಕುಳಿತ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ದಿಟ್ಟತನದಿಂದ ಮನೆ ಮನೆಗೆ ತೆರಳಿ ಸೇವೆ ಸಲ್ಲಿಸಿದ್ದು ನಿಜಕ್ಕೂ ಅಭಿನಂದನೀಯ. ಕೊರೋನ ಸೋಂಕು ನಿಯಂತ್ರಣದಲ್ಲಿಯೂ ಅವರ ಪಾತ್ರ ಮಹತ್ವದ್ದು ಎಂದು ಪಾಟೀಲ್, ಆಶಾ ಕಾರ್ಯಕರ್ತೆಯರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಸಚಿವ ಸೋಮಶೇಖರ್ ಮಾತನಾಡಿ, ಆಶಾ ಕಾರ್ಯಕರ್ತರಿಗೆ ವಿವಿಧೋದ್ದೇಶಗಳ ಸಂಸ್ಥೆಯನ್ನು ಮಾಡಿ ಸಾಲ ನೀಡುವ ಚಿಂತನೆ ಇದೆ. ಅದನ್ನು ಗದಗ ಜಿಲ್ಲೆಯಿಂದಲೇ ಆರಂಭಿಸಬೇಕೆಂಬುದು ತಮ್ಮ ಅಪೇಕ್ಷೆ. ಇದಕ್ಕೆ ಆಶಾ ಕಾರ್ಯಕರ್ತೆಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಆಶಾ ಕಾರ್ಯಕರ್ತೆಯರು ಅತ್ಯಂತ ಸ್ವಾಭಿಮಾನಿಗಳು. ಅವರಿಗೆ ಸಾಲ ನೀಡಿದರೆ ನೂರಕ್ಕೆ ನೂರು ಮರುಪಾವತಿಯಾಗಲಿದೆ. ಹೀಗಾಗಿ ಅವರಿಗೆ ಸಹಕಾರ ವಲಯದಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕೆಂಬ ಎಂಬ ಬಗ್ಗೆ ಚರ್ಚಿಸಿ, ಅವರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಸೋಮಶೇಖರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News