ಗಡಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಬಹಿರಂಗಪಡಿಸಿ: ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯ

Update: 2020-06-20 12:36 GMT

ಬೆಂಗಳೂರು, ಜೂ. 20: ಭಾರತ ಮತ್ತು ಚೀನಾ ಗಡಿಯಲ್ಲಿ ಏನು ನಡೆಯುತ್ತಿದೆ ಎಂಬುದು ದೇಶದ ಜನತೆಗೆ ತಿಳಿಯಬೇಕು. ಹೀಗಾಗಿ ಪ್ರಧಾನಿ ಮೋದಿ ಯಾವುದನ್ನು ಮುಚ್ಚಿಡದೆ, ಅಲ್ಲೇನು ನಡೆಯುತ್ತಿದೆ ಎಂಬುದನ್ನು ಕೂಡಲೇ ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಶನಿವಾರ ಇಲ್ಲಿನ ಸದಾಶಿವ ನಗರದಲ್ಲಿ ತನ್ನ ನಿವಾಸದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಜನರಿಗೆ ಯಾವುದೇ ಕಾರಣಕ್ಕೂ ತಪ್ಪು ಭಾವನೆ ಮೂಡಬಾರದು. ಹೀಗಾಗಿ ಗುಪ್ತಚರ ಇಲಾಖೆ ಲೋಪ, ಸೈನಿಕರಿಗೆ ಶಸ್ತ್ರಾಸ್ತ್ರಗಳ ಕೊರತೆ ಸೇರಿದಂತೆ ಎಲ್ಲ ವಿಚಾರಗಳನ್ನು ತಿಳಿಸಬೇಕು ಎಂದು ಒತ್ತಾಯಿಸಿದರು.

ಕೊರೋನ ವೈರಸ್ ಸೋಂಕಿನ ಕಾರಣಕ್ಕೆ ಸಾಕಷ್ಟು ಸಮಸ್ಯೆಯಾಗಿದೆ. ಈ ಮಧ್ಯೆ ಚೀನಾ ತನ್ನ ಅಟ್ಟಹಾಸ ಪ್ರದರ್ಶಿಸುತ್ತಿದೆ. ಈ ಹಿಂದೆಯೂ ಚೀನಾ ದಾಳಿ ನಡೆಸಿತ್ತು. ಆದರೆ, ಚೀನಾದವರಿಗೆ ಮೋದಿ ಮಾನ್ಯತೆ ನೀಡದ ಕಾರಣಕ್ಕೆ ಅವರು ತಮ್ಮ ಕುತಂತ್ರ ಬುದ್ಧಿಯನ್ನು ತೋರಿಸಿದ್ದಾರೆ. ಗಡಿಯಲ್ಲಿ ಏನು ನಡೆಯುತ್ತಿದೆ ಎಂದು ಬಹಿರಂಗಪಡಿಸಬೇಕು ಎಂದು ಖರ್ಗೆ ಕೋರಿದರು.

ಗಡಿಯಲ್ಲಿ ಚೀನಾದ ಅತಿರೇಕರ ವರ್ತನೆಯ ವಿರುದ್ಧ ದೇಶದ ಜನರಲ್ಲಿ ಆಕ್ರೋಶವಿದ್ದು, ಎಲ್ಲರೂ ಒಂದಾಗಿದ್ದಾರೆ. ಯಾರೊಬ್ಬರೂ ಭಿನ್ನಮತದ ಹೇಳಿಕೆ ನೀಡಿಲ್ಲ. ನೆಲ, ಜಲ, ಭಾಷೆ, ರಾಷ್ಟ್ರೀಯತೆ ವಿಚಾರಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ಸಂದರ್ಭದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News