ರಾಜ್ಯದಲ್ಲಿ 'ದೂರಶಿಕ್ಷಣ'ಕ್ಕೆ ಇನ್ನು ಒಂದೇ ವಿಶ್ವವಿದ್ಯಾಲಯ
ಬೆಂಗಳೂರು, ಜೂ. 20: ರಾಜ್ಯದ ವಿವಿಧ ವಿಶ್ವ ವಿದ್ಯಾಲಯಗಳು ನೀಡುತ್ತಿದ್ದ 'ದೂರ ಶಿಕ್ಷಣ' ರದ್ದುಗೊಳಿಸಿ, ಇನ್ನು ಮುಂದೆ 'ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ-ಮೈಸೂರು' ಇದರಡಿಯಲ್ಲಿ ದೂರ ಶಿಕ್ಷಣ ನೀಡುವ ಹೊಸ ವ್ಯವಸ್ಥೆ ರೂಪಿಸಲು ರಾಜ್ಯ ಸರಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಶನಿವಾರ ಅಂಕಿತ ಹಾಕಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿತ್ತು. ಇದೀಗ ಕಾನೂನು ತಿದ್ದುಪಡಿ ಮಾಡಿದ್ದು, 'ವಿಶ್ವ ವಿದ್ಯಾಲಯಗಳ ಕಾನೂನು ತಿದ್ದುಪಡಿ' ಸಂಬಂಧ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಬೆಂಗಳೂರು ಕೇಂದ್ರ ವಿಶ್ವ ವಿದ್ಯಾಲಯದ ಹೆಸರನ್ನು 'ಬೆಂಗಳೂರು ಸಿಟಿ ವಿಶ್ವ ವಿದ್ಯಾಲಯ' ಎಂದು ಮರು ನಾಮಕರಣ ಮಾಡಲು ಕಾನೂನು ತಿದ್ದುಪಡಿ ಮಾಡಲಾಗಿದೆ.
ಬೆಂಗಳೂರು ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಸರಕಾರಿ ವಿಜ್ಞಾನ ಕಾಲೇಜಿಗೆ ಪ್ರತ್ಯೇಕ ವಿವಿ ಸ್ವರೂಪಸ ನೀಡಿ 'ನೃಪತುಂಗ ವಿಶ್ವ ವಿದ್ಯಾಲಯ ಬೆಂಗಳೂರು' ಎಂದು ನಾಮಕರಣ ಮಾಡಲಾಗುವುದು. ಮಂಡ್ಯ ಮತ್ತು ಮಹಾರಾಣಿ ಸ್ವಾಯತ್ತ ವಿವಿಗಳಿಗೆ ಪ್ರಥಮ ಕುಲಪತಿ ನೇಮಕಕ್ಕೆ ಸುಗ್ರೀವಾಜ್ಞೆ ಮೂಲಕ ಕ್ರಮ ವಹಿಸಲಾಗಿದೆ.
ಇದರ ಜೊತೆಗೆ ವಿವಿ ಕಾಯ್ದೆ ತಿದ್ದುಪಡಿ ಮೂಲಕ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಲು ಕಾನೂನು ರೂಪಿಸಲಾಗುತ್ತದೆ. ಅಲ್ಲದೆ, ಎರಡೂ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಆಗಿ ಗ್ರೂಪ್ 'ಎ' ದರ್ಜೆ ಅಧಿಕಾರಿಗಿಂತ ಕಡಿಮೆ ಇಲ್ಲದ ಅಧಿಕಾರಿಯನ್ನು ನೇಮಿಸಲು ಕ್ರಮ ವಹಿಸಬೇಕು ಎಂದು ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ.