ತರೀಕೆರೆ ಡಿವೈಎಸ್ಪಿ ಕಚೇರಿಯ ನಾಲ್ವರು ಪೊಲೀಸರಿಗೆ ಕೊರೋನ ಪಾಸಿಟಿವ್

Update: 2020-06-20 15:20 GMT

ಚಿಕ್ಕಮಗಳೂರು, ಜೂ.20: ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಶನಿವಾರ ಒಂದೇ ಜಿಲ್ಲೆಯಲ್ಲಿ 8 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿರುವುದು ಪ್ರಯೋಗಾಲಯದ ವರದಿಗಳು ದೃಢಪಡಿಸಿವೆ. ಈ ಪೈಕಿ ನಾಲ್ಕು ಪಾಸಿಟಿವ್ ಪ್ರಕರಣಗಳು ಪೊಲೀಸ್ ಪೇದೆಗಳಲ್ಲಿ ಕಂಡು ಬಂದಿರುವುದು ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ.

ಶನಿವಾರ ಪತ್ತೆಯಾದ 8 ಪ್ರಕರಣಗಳ ಪೈಕಿ ನಾಲ್ಕು ಪ್ರಕರಣಗಳು ತರೀಕೆರೆ ಪಟ್ಟಣದಲ್ಲಿರುವ ಡಿವೈಎಸ್ಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆಗಳಲ್ಲಿ ಕಂಡು ಬಂದಿದೆ. ಉಳಿದ ನಾಲ್ಕು ಪ್ರಕರಣಗಳ ಪೈಕಿ 2 ಪ್ರಕರಣ ನರಸಿಂಹರಾಜಪುರ ತಾಲೂಕಿನಲ್ಲಿ ಕಂಡು ಬಂದಿದ್ದರೆ ಕೊಪ್ಪ ಹಾಗೂ ಶೃಂಗೇರಿ ತಾಲೂಕಿನಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿದೆ.

ನರಸಿಂಹರಾಜಪುರ ತಾಲೂಕಿನ ಎರಡು ಪಾಸಿಟಿವ್ ಪ್ರಕರಣಗಳು ಇತ್ತೀಚೆಗೆ ಮಹಾರಾಷ್ಟ್ರದಿಂದ ಜಿಲ್ಲೆಗೆ ಹಿಂದಿರುಗಿದ್ದವರಲ್ಲಿ ಕಂಡು ಬಂದಿದ್ದರೆ, ಕೊಪ್ಪ ತಾಲೂಕಿನ ಪ್ರಕರಣ ತಮಿಳುನಾಡಿನಿಂದ ಹಿಂದಿರುಗಿದ್ದ ವ್ಯಕ್ತಿಯದ್ದಾಗಿದೆ. ಶೃಂಗೇರಿ ತಾಲೂಕಿನಲ್ಲಿ ಪತ್ತೆಯಾದ ಪ್ರಕರಣ ಮಹಿಳೆಯದ್ದಾಗಿದ್ದು, ಗರ್ಭಿಣಿಯಾಗಿರುವ ಈ ಮಹಿಳೆ ಇತ್ತೀಚೆಗೆ ಕುವೈತ್ ನಿಂದ ಹಿಂದಿರುಗಿದ್ದರು.

ತರೀಕೆರೆ ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿನ ನಾಲ್ವರು ಪೊಲೀಸ್ ಪೇದೆಗಳಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿರುವುದರಿಂದ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದ್ದು, ಕಚೇರಿಯ ಡಿವೈಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.

ಶನಿವಾರ ಪತ್ತೆಯಾದ 8 ಪ್ರಕರಣಗಳೂ ಸೇರಿದಂತೆ ಈ ಹಿಂದೆ ಪತ್ತೆಯಾದ 8 ಪಾಸಿಟಿವ್ ಪ್ರಕರಣ ಸೇರಿ ಜಿಲ್ಲೆಯಲ್ಲಿ ಸದ್ಯ ಸೋಂಕಿತರ ಸಂಖ್ಯೆ 16ಕ್ಕೇರಿದ್ದು, ಈ ಪ್ರಕರಣಗಳಿಗೂ ಮುನ್ನ ಪತ್ತೆಯಾಗಿದ್ದ 16 ಸೋಂಕಿತರು ಗುಣಮುಖರಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸೋಂಕಿಗೆ ತುತ್ತಾಗಿದ್ದ ಅಜ್ಜಂಪುರ ತಾಲೂಕಿನ ಓರ್ವ ವೃದ್ಧೆ ಇತ್ತೀಚೆಗೆ ಮೃತಪಟ್ಟಿದ್ದಾರೆ.

ಶನಿವಾರ ಸೋಂಕಿಗೆ ತುತ್ತಾಗಿರುವ 8 ಮಂದಿಯನ್ನೂ ಚಿಕ್ಕಮಗಳೂರು ನಗರದ ಕೊರೋನ ಚಿಕಿತ್ಸೆಗೆ ಕರೆತರಲಾಗಿದೆ. ಎಲ್ಲರಿಗೂ ಚಿಕಿತ್ಸೆ ಆರಂಭಿಸಲಾಗಿದ್ದು, ಶೃಂಗೇರಿ ತಾಲೂಕಿನ ಗರ್ಭಿಣಿ ಮಹಿಳೆಗೂ ಚಿಕಿತ್ಸೆ ಅರಂಭಿಸಲಾಗಿದೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಗಳ ಪತ್ತೆಗೆ ಅಧಿಕಾರಿಗಳ ತಂಡವನ್ನು ನೇಮಿಸಲಾಗಿದೆ.
- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News