ಮುಂದಿನ ನಾಲ್ಕು ದಿನ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ಬೆಂಗಳೂರು, ಜೂ.20: ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು ಕರಾವಳಿ ಹಾಗೂ ಒಳನಾಡಿನ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದೆ. ಇನ್ನು ನಾಲ್ಕು ದಿನಗಳ ಕಾಲ ಕರಾವಳಿ ಜಿಲ್ಲೆಗಳು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಹಾಗೂ ಬಿರುಸಿನ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ. ಪ್ರಸ್ತುತ ಕರಾವಳಿ ಜಿಲ್ಲೆಯ ಕೆಲವು ಭಾಗದಲ್ಲಿ ಮಳೆಯಾಗುತ್ತಿದೆ. ಈ ಜಿಲ್ಲೆಗಳ ಸಮುದ್ರದ ತಟದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಲಿದ್ದು ತಟದಲ್ಲಿ ವಾಸಿಸುತ್ತಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿರುವುದಲ್ಲದೆ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಕರಾವಳಿ, ಘಟ್ಟ ಪ್ರದೇಶ ಹಾಗೂ ಮಲೆನಾಡಿನ ಭಾಗದಲ್ಲಿ ಪ್ರಬಲ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಗಳಿದ್ದರೆ, ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.