×
Ad

ಎಚ್.ವಿಶ್ವನಾಥ್ ರಾಜಕೀಯದಲ್ಲಿ ದುರಂತ ಅಂತ್ಯ ಕಂಡಿದ್ದಾರೆ: ಸಾ.ರಾ.ಮಹೇಶ್

Update: 2020-06-20 22:55 IST

ಮೈಸೂರು,ಜೂ.20: ತಮ್ಮನ್ನ ಆಯ್ಕೆ ಮಾಡಿದ ಮತದಾರರಿಗೆ, ಪಕ್ಷದ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ದ್ರೋಹ ಎಸಗಿದರೆ ರಾಜಕೀಯದಲ್ಲಿ ದುರಂತ ಅಂತ್ಯ ಕಾಣಲಿದ್ದಾರೆ ಎಂಬುದಕ್ಕೆ ಈ ವ್ಯಕ್ತಿ ಉದಾಹರಣೆ ಎಂದು ಶಾಸಕ ಸಾ.ರಾ.ಮಹೇಶ್ ಮಾಜಿ ಸಚಿವ ಎಚ್.ವಿಶ್ವನಾಥ್ ಹೆಸರು ಹೇಳದೆ, ಪರೋಕ್ಷವಾಗಿ ಲೇವಡಿ ಮಾಡಿದರು.

ನಗರದ ತಮ್ಮ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸುದೀರ್ಘ 50 ವರ್ಷಗಳ ರಾಜಕೀಯ ಮಾಡಿದ ವ್ಯಕ್ತಿ ರಾಜಕೀಯದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ರಾಜಕೀಯದಲ್ಲಿ ಮತದಾರರಿಗೆ, ನಾಯಕರಿಗೆ, ಕ್ಷೇತ್ರದ ಜನರಿಗೆ ದ್ರೋಹ ಮಾಡಿದರೆ ಹೀಗೆ ಆಗೋದು. ರಾಜಕಾರಣಿಗೆ ಪ್ರಾಮಾಣಿಕತೆ ಇಲ್ಲ ಅಂದರೆ ಏನಾಗುತ್ತೆ ಅನ್ನೋದಕ್ಕೆ ಇವರೇ ಉದಾಹರಣೆ. ಇನ್ನು ಅವರಿಗೆ ಬಾಕಿ ಇರೋದು ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆ ಮಾತ್ರ. ಜಿಲ್ಲೆಯ ಎಲ್ಲ ಪಕ್ಷ ರಾಜಕಾರಣಿಗಳಿಗೆ ಇವರ ಸ್ಥಿತಿ ಒಳ್ಳೆಯ ಪಾಠ. ಜೆಡಿಎಸ್ ನಾಯಕರು ಕಾರ್ಯಕರ್ತರು ನೀಡಿದ ಭಿಕ್ಷೆಯಿಂದ ಅವರು ಎರಡು ವರ್ಷ ಚಲಾವಣೆಯಲ್ಲಿದ್ದರು. ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ ಎಂದು ಹೆಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದರು. 

ಮೈಮುಲ್ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದ್ದು, ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕೆಂದು ಶಾಸಕ ಸಾ.ರಾ.ಮಹೇಶ್ ಎಚ್ಚರಿಸಿದರು.

ಮೈಮುಲ್ ಅಕ್ರಮ ನೇಮಕಾತಿ ಪ್ರಕ್ರಿಯೆಗೆ ಹೈ ಕೋರ್ಟ್ ತಡೆ ನೀಡಿದೆ. ಹೈಕೋರ್ಟ್ ನೇಮಕಾತಿ ಪ್ರಕ್ರಿಯೆಗೆ 3 ವಾರಗಳ ನಿಷೇಧಾಜ್ಞೆ ಹೇರಿದೆ. ಇದರಿಂದಾಗಿ ಮೈಮುಲ್ ಎಲ್ಲ ಪ್ರಕ್ರಿಯೆಗೆ ತಡೆ ಬಿದ್ದಿದೆ. ಕೊನೆಗೂ ನಮ್ಮ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಪಾರದಾರ್ಶಕವಾಗಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆಸಬೇಕು. ನ್ಯಾಯಯುತವಾಗಿ ನೇಮಕಾತಿ ನಡೆಯಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕ್ರಮ ಕೈಗೊಳ್ಳಬೇಕು. ಹಣವನ್ನು ಅಡ್ವಾನ್ಸ್ ಮಾಡಿದವರು ಬಡ್ಡಿ ಸಮೇತ ವಾಪಸ್ ಪಡೆದುಕೊಳ್ಳಿ. ಹಣ ಕಳೆದುಕೊಂಡವರ ಜೊತೆ ನಾವು ಇದ್ದೇ ಇರುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News