ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ವಿರೋಧ: ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ

Update: 2020-06-20 18:11 GMT

ಮೈಸೂರು,ಜೂ.20: ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಎಪಿಎಂಸಿ ಮುಂಭಾಗ ಶನಿವಾರ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಮಾತನಾಡಿ, ಭೂಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ರೈತ ಸಂಘದಿಂದ ಇಂದು ರಾಜ್ಯಾದ್ಯಂತ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ತಡೆ ಹಿಡಿಯುವ ಮೂಲಕ ಚಳವಳಿಗೆ ಚಾಲನೆ ನೀಡುತ್ತಿದ್ದೇವೆ. ಈ ತಿದ್ದುಪಡಿಯಿಂದ ರೈತ ಕುಲಕ್ಕೆ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮಾರಕವಾಗಿ ಪರಿಣಮಿಸುವ ಕಾಯ್ದೆಯನ್ನು ತರಾತುರಿಯಲ್ಲಿ ವಿಧಾನಸೌಧದಲ್ಲಿ ಯಾವುದೇ ಚರ್ಚೆಗಳನ್ನು ಮಾಡದೇ ರೈತರ ಅನಾದಿಕಾಲದ ಹೋರಾಟವಾದ ರೈತ ಬೆಳೆದ ಖಾಯಂ ಬೆಲೆಯನ್ನು ಕಟ್ಟುವಂತಹ ಕಾಯ್ದೆಗಳನ್ನು ಜಾರಿಗೊಳಿಸದೇ, ರೈತನ ಕೈಹಿಡಿದು ಎತ್ತುವಂತಹ ಕಾಯ್ದೆಗಳನ್ನು ಜಾರಿಗೊಳಿಸದೇ, ಮನೆಮಠಗಳನ್ನು ಮಾರಿಕೊಂಡು ರೈತರ ಸಮುದಾಯವನ್ನೇ ನಿರ್ಮೂಲನೆ ಮಾಡುವಂತಹ ಕಾಯ್ದೆಗಳನ್ನು ತರಾತುರಿಯಲ್ಲಿ ಮಂಡಿಸುತ್ತಿರುವ ನಿಮ್ಮ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ಕೊರೋನಾ ಪರಿಸ್ಥಿತಿ ಮತ್ತು ಸೆಕ್ಷನ್ 144 ಇರುವುದರ ದುರ್ಲಾಭ ಪಡೆದುಕೊಂಡು ಕಾರ್ಪೋರೇಟ್ ಕಂಪನಿಗಳ, ರಿಯಲ್ ಎಸ್ಟೇಟ್ ಕಂಪನಿಗಳ ಬೃಹತ್ ಕೈಗಾರಿಕಾ ಕಂಪನಿಗಳ ಏಜೆಂಟರಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಮತ್ತು ಇದರ ಬಗ್ಗೆ ಕಾಟಾಚಾರದ ಪತ್ರಿಕಾ ಹೇಳಿಕೆಗಳನ್ನು ಕೊಟ್ಟು ಕಾರ್ಯರೂಪದಲ್ಲಿ ಯಾವುದೇ ಹೋರಾಟವನ್ನು ಮಾಡದೇ ಇರುವ ವಿರೋಧ ಪಕ್ಷದ ವಿರುದ್ದವೂ ದೀರ್ಘಕಾಲದ ಹೋರಾಟವನ್ನು ರಸ್ತೆ ತಡೆ ಚಳವಳಿ ಮಾಡುವುದರ ಮೂಲಕ ನಮ್ಮ ಹೋರಾಟ ಮಾಡುತ್ತೇವೆ ಎಂದರು. ಇದು ಆರಂಭವಷ್ಟೇ. ಮುಂದಿನ ದಿನಗಳಲ್ಲಿ ಇದರ ತೀವ್ರತೆ ಇನ್ನೂ ಹೆಚ್ಚಾಗಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ವಿದ್ಯಾಸಾಗರ್ ಟಿ.ರಾಮೇಗೌಡ, ಎಸ್.ರಘು ಹಿಮ್ಮಾವು, ಮಂಜುಕಿರಣ್ ಸತೀಶ್ ರಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News