ಯೋಗ ದಿನಾಚರಣೆ: ರಾಜ್ಯಪಾಲ, ಸಿಎಂ ಬಿಎಸ್‌ವೈ, ವಿಪಕ್ಷ ನಾಯಕ ಸೇರಿ ಗಣ್ಯರಿಂದ ಮನೆಯಲ್ಲಿಯೇ ಯೋಗಾಸನ
ಬೆಂಗಳೂರು, ಜೂ. 21: ಮಾರಕ ಕೊರೋನ ಸೋಂಕಿನ ಭೀತಿಯ ನಡುವೆಯೇ 'ವಿಶ್ವ ಯೋಗ ದಿನಾಚರಣೆ' ಅಂಗವಾಗಿ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಚಿವರು-ಶಾಸಕರು ಸೇರಿದಂತೆ ಹಲವು ಗಣ್ಯರು ಯೋಗಾಭ್ಯಾಸದ ಮೂಲಕ 'ಯೋಗ'ದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ರವಿವಾರ ಬೆಳಗ್ಗೆ 6 ಗಂಟೆಗೆ ರಾಜಭವನದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು, ಯೋಗಾಸನ ಮಾಡಿ ಮೂಲಕ ಗಮನ ಸೆಳೆದರು. 'ಯೋಗದಿಂದ ಆರೋಗ್ಯ ಸುಧಾರಣೆಯಷ್ಟೇ ಅಲ್ಲದೆ, ರೋಗ ನಿರೋಧಕ ಶಕ್ತಿ ವೃದ್ಧಿಸಲಿದೆ. ಒತ್ತಡ ನಿವಾರಣೆಯಾಗಿ ಮಾನಸಿಕ ನೆಮ್ಮದಿ ಮೂಡಲಿದೆ. ಕೊರೋನ ಸಂಕಷ್ಟದ ಕಾಲದಲ್ಲಿ ಸದೃಢ ಆರೋಗ್ಯಕ್ಕೆ ಯೋಗ ಸಿದ್ಧೌಷಧ' ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ನಿವಾಸದಲ್ಲೆ ಯೋಗ ಮಾಡಿದರು. "ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಅತ್ಯುತ್ತಮ ಮಾರ್ಗವಾಗಿರುವ ಯೋಗವನ್ನು ಜೀವನ ಶೈಲಿಯ ಭಾಗವಾಗಿಸಿಕೊಳ್ಳೊಣ. ಮನೆಯಲ್ಲೆ ಯೋಗ, ಕುಟುಂಬದೊಂದಿಗೆ ಯೋಗ ಎಂಬುದು ಈ ಬಾರಿಯ ಯೋಗ ದಿನದ ಘೋಷವಾಕ್ಯವಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಯೋಗ ದಿನವನ್ನು ಆಚರಿಸೋಣ" ಎಂದು ಮನವಿ ಮಾಡಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಯೋಗ ಮಾಡಿದರು. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಯುವಕರನ್ನು ಬೆರಗುಗೊಳಿಸುವ ರೀತಿಯಲ್ಲಿ ಯೋಗಾಸನ ಮಾಡಿದರು. ಅಲ್ಲದೆ, "ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಯೋಗ ಒಂದು ಸಮಗ್ರ ವಿಧಾನ. ವಿಶ್ವ ಯೋಗ ದಿನದ ಶುಭಾಶಯಗಳು" ಎಂದು ಎಲ್ಲರಿಗೂ ಶುಭ ಕೋರಿದರು.
ಕೊರೋನ ಸೋಂಕಿನ ಕರಿನೆರಳಿನ ನಡುವೆ ಈ ಬಾರಿ ಸಾಮೂಹಿಕ ಯೋಗ ಪ್ರದರ್ಶನಗಳ ಸಂಖ್ಯೆ ಕಡಿಮೆ ಇತ್ತು. ಈ ವೇಳೆ ಮಾಸ್ಕ್ ಧರಿಸಿ, ಸುರಕ್ಷಿತ ಅಂತರ ಕಾಯ್ದುಕೊಂಡು ಯೋಗಾಸನ ಮಾಡಲಾಯಿತು. ಅಲ್ಲದೆ, ಸ್ಯಾನಿಟೈಸರ್ ಬಳಕೆ, ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ ಕೊರೋನ ಮುನ್ನಚ್ಚರಿಕೆ ವಹಿಸಲಾಗಿತ್ತು.
ಅಧ್ಯಾತ್ಮದ ಕೊಂಡಿ ಯೋಗ: ಅಂತರ್ ರಾಷ್ಟ್ರೀಯ ಯೋಗ ದಿನದ ಅಂಗವಾಗಿ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಮನಸ್ಸು, ಬುದ್ಧಿ, ಆತ್ಮದ ಏಕಾಗ್ರತೆಯ ಮೂಲಕ ಭಗವಂತನನ್ನು ಮತ್ತು ಮೋಕ್ಷ ಕಾಣಬಹುದೆಂಬ ಚಿಂತನೆಯನ್ನು ನೀಡಿದ ಋಷಿ, ಮುನಿಗಳ ಮಾರ್ಗವೂ ಆಗಿದ್ದ ಯೋಗ, ಆಧ್ಯಾತ್ಮದ ಕೊಂಡಿ ಎಂದರೆ ಉತ್ಪ್ರೇಕ್ಷೆಯಲ್ಲ ಎಂದರು.
ಯೋಗವು ಭಾರತೀಯ ಸಂಸ್ಕೃತಿಯ ಅಮೂಲ್ಯವಾದ ಪದ್ಧತಿ. ಭಾರತ ಜಗತ್ತಿಗೆ ನೀಡಿದ ವಿಜ್ಞಾನಸ, ಗಣಿತ, ಶಿಕ್ಷಣ ಸೇರಿದಂತೆ ಹತ್ತಾರ ಕೊಡುಗೆಯಲ್ಲಿ ಪ್ರಮುಖವಾದದ್ದು ಯೋಗ. ಕಣ್ಣು ಮುಚ್ಚಿ ಹೃದಯ ತೆರೆದು ದೇವರ ದರ್ಶನ ಮಾಡಿಸಿದ ಸಂಸ್ಕೃತಿಯಲ್ಲಿ ಆಧ್ಯಾತ್ಮವೂ ಒಂದು ಎಂದು ನಳಿನ್ ಕುಮಾರ್ ಕಟೀಲು, ಯೋಗದ ಮಹತ್ವವನ್ನು ತಿಳಿಸಿದರು.
ಯೋಗ ಒಂದು ದಿನದ ಪ್ರದರ್ಶನ ಆಗಬಾರದು. ನಿರಂತರ ಅಭ್ಯಾಸ ಮಾಡಲು ಪ್ರಯತ್ನಸಬೇಕು. ಯೋಗಾಭ್ಯಾಸ ವೈಯಕ್ತಿಕವಾಗಿ ನನ್ನ ಆರೋಗ್ಯಕ್ಕೆ ನೆರವಾಗಿದೆ. ನೀವೂ ನಿಮಗಾಗಿ ಯೋಗಾಭ್ಯಾಸ ಮಾಡಿ'
-ಸಿದ್ದರಾಮಯ್ಯ, ವಿಪಕ್ಷ ನಾಯಕ