ರಾಜ್ಯದಲ್ಲಿ ಕೊರೋನ ಕಣ್ಗಾವಲು-ನಿಯಂತ್ರಣಕ್ಕೆ ಹೊಸ ಕಾರ್ಯ ತಂಡ ರಚನೆ

Update: 2020-06-21 12:47 GMT

ಬೆಂಗಳೂರು, ಜೂ. 21: ರಾಜ್ಯದಲ್ಲಿ ಮಾರಕ ಕೊರೋನ ಸೋಂಕು ಮಿತಿ ಮೀರುತ್ತಿರುವ ಬೆನ್ನಲ್ಲೆ ಸಾರ್ವಜನಿಕರಲ್ಲಿ ಸೋಂಕಿನ ಭೀತಿಯೂ ಹೆಚ್ಚುತ್ತಿದೆ. ಹೀಗಾಗಿ ರೋಗ ಹರಡುವುದನ್ನು ನಿಯಂತ್ರಿಸಲು 'ಕೊರೋನ ಕಣ್ಗಾವಲು ಮತ್ತು ಜನಸಾಮಾನ್ಯರ ಆರೋಗ್ಯ ರಕ್ಷಣೆ'ಗೆ ಹೊಸ ಕಾರ್ಯ ತಂಡವನ್ನು ರಚನೆ ಮಾಡಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.

ಕೊರೋನ ಸಕಾರಾತ್ಮಕ ಸೋಂಕಿತರನ್ನು ತಮ್ಮ ಮನೆಗಳಿಂದ ಅಥವಾ ಸಾಂಸ್ಥಿಕ ಸಂಪರ್ಕ ತಡೆಯ ಸ್ಥಳಗಳಿಂದ ಕೋವಿಡ್-19 ಆಸ್ಪತ್ರೆಗಳು ಅಥವಾ ಆರೋಗ್ಯ ಕೇಂದ್ರಗಳ, ಆರೈಕೆ ಕೇಂದ್ರಗಳಿಗೆ ವರ್ಗಾವಣೆ ಮಾಡುವ ಸಂಬಂಧ ಒಂದು ಕಾರ್ಯ ತಂಡವನ್ನು ರಚನೆ ಮಾಡಲು ಆದೇಶದಲ್ಲಿ ಸೂಚಿಸಲಾಗಿದೆ.

ಬೆಂಗಳೂರು ನಗರದಲ್ಲಿ ಕೊರೋನ ವೈರಸ್ ಸೋಂಕಿತ ರೋಗಿಗಳ ವರ್ಗಾವಣೆಗೆ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಈ ತಂಡದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್, ವೈಟ್‍ಫೀಲ್ಡ್ ಡಿಸಿಪಿ ಅನುಚೇತ್, 108 ಸೇವೆಗಳ ಉಪ ನಿರ್ದೇಶಕ ಡಾ.ಬಣಕಾರ್ ಇದ್ದಾರೆ. ಹೊಸ ಕಾರ್ಯ ತಂಡ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಆಯುಕ್ತರಿಗೆ ವರದಿ ಮಾಡತಕ್ಕದ್ದು ಎಂದು ನಿರ್ದೇಶನ ನೀಡಲಾಗಿದೆ.

ಸೋಂಕಿತರ ಹೆಚ್ಚಿನ ಸಂಖ್ಯೆಯಲ್ಲಿರುವ ಕಂಟೈನ್ಮೆಂಟ್ ವಲಯಗಳಲ್ಲಿನ ಕಾರ್ಯ ಚಟುವಟಿಕೆಗಳನ್ನು ನೋಡಿಕೊಳ್ಳಲು ಕೆಪಿಎಸ್ಸಿಯ ಕಾರ್ಯದರ್ಶಿ ಸತ್ಯವತಿ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದು, ಬಿಬಿಎಂಪಿ ವಿಶೇಷ ಆಯುಕ್ತ ಬಸವರಾಜ್, ಡಿಸಿಪಿ ದಿವ್ಯಾ ಅವರು ಇದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ಸಂಬಂಧ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ನವೀನ್ ರಾಜ್ ಸಿಂಗ್, ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿನ ತಂಡದಲ್ಲಿ ರಚನೆ ಮಾಡಲಾಗಿದೆ. ಈ ತಂಡದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ಅನ್ಬು ಕುಮಾರ್, ಕೃಷಿ ಮಾರುಕಟ್ಟೆ ನಿರ್ದೇಶಕ ಕರೀಗೌಡ, ಹಿರಿಯ ಅಧಿಕಾರಿ ರಾಜ್ಬೀರ್ ಸಿಂಗ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News