ತಂತ್ರಜ್ಞಾನದ ಯುಗದಲ್ಲಿರುವ ಜನರು ಮೌಢ್ಯದಿಂದ ಹೊರಬರಬೇಕು: ಸತೀಶ್ ಜಾರಕಿಹೊಳಿ

Update: 2020-06-21 15:29 GMT

ಬೆಳಗಾವಿ, ಜೂ.21: ಸೂರ್ಯ ಗ್ರಹಣ, ಚಂದ್ರ ಗ್ರಹಣ ಎಂಬುದು ಪ್ರಾಕೃತಿಕವಾಗಿ ಸಹಜವಾಗಿ ನಡೆಯುವಂತಹ ಪ್ರಕ್ರಿಯೆ. ಆದರೆ, ಇದನ್ನೆ ಕೆಲವರು ಬಂಡವಾಳ ಮಾಡಿಕೊಂಡು ಅಮಾಯಕ ಜನರಲ್ಲಿ ಭಯದ ವಾತಾವರಣ ಮೂಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ಗೋಕಾಕ್ ತಾಲೂಕಿನಲ್ಲಿರುವ ಹಿಲ್ ಗಾರ್ಡನ್‍ನಲ್ಲಿ ತಮ್ಮ ಮಕ್ಕಳಾದ ಪ್ರಿಯಾಂಕಾ, ರಾಹುಲ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಗ್ರಹಣದ ವೇಳೆ ಉಪಹಾರ ಸೇವಿಸಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಮೌಢ್ಯದ ವಿರುದ್ಧ ಇತಿಹಾಸದುದ್ದಕ್ಕೂ ಸಮರ ನಡೆದಿದೆ. ಜನರಲ್ಲಿ ಮನೆ ಮಾಡಿರುವ ಮೌಢ್ಯವನ್ನು ಹೋಗಲಾಡಿಸಲು ನಾವು ಹಲವಾರು ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದ್ದೇವೆ ಎಂದರು.

ಈ ಗ್ರಹಣಗಳಿಂದ ಜನರಿಗೆ ಯಾವ ರೀತಿಯ ತೊಂದರೆಯೂ ಆಗುವುದಿಲ್ಲ. ಆದರೆ, ಮೌಢ್ಯ, ಕಂದಾಚಾರಗಳಿಂದಾಗಿ ಜನರಲ್ಲಿ ಕೆಲವರು ಭಯದ ವಾತಾವರಣ ನಿರ್ಮಿಸುವ ಕೆಲಸವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಈಗಲೂ ಆ ಪ್ರವೃತ್ತಿ ಮುಂದುವರಿದಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಸ್ಮಶಾನದಲ್ಲಿ ಸಾಮೂಹಿಕವಾಗಿ ಭೋಜನ ಸ್ವೀಕರಿಸುವ ಮೂಲಕ ಮೌಢ್ಯದ ವಿರುದ್ಧ ಹೋರಾಡುತ್ತಿದ್ದೇವೆ. ಇನ್ನೂ ಅನೇಕ ಬಗೆಯ ಕಾರ್ಯಕ್ರಮಗಳನ್ನು ಮಾಡಿ ಜನರಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ. ತಂತ್ರಜ್ಞಾನದ ಈ ಯುಗದಲ್ಲಿರುವ ಜನರು ಇನ್ನಾದರೂ ಮೌಢ್ಯ, ಕಂದಾಚಾರಗಳಿಂದ ಹೊರಬರಬೇಕು ಎಂದು ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News