ಬಿ.ಸಿ.ಪಾಟೀಲ್ ನಿಜವಾದ ಮಣ್ಣಿನ ಮಗ: ಸಚಿವ ಎಸ್.ಟಿ.ಸೋಮಶೇಖರ್

Update: 2020-06-21 18:04 GMT

ಹಾವೇರಿ, ಜೂ. 21: `ಮಣ್ಣಿನ ಮಕ್ಕಳು ಎಂಬ ಗುತ್ತಿಗೆ, ಬಿರುದನ್ನು ತೆಗೆದುಕೊಂಡಿರುವ ಕೆಲ ರಾಜಕಾರಣಿಗಳು ಅಧಿಕಾರಕ್ಕೆ ಬಂದಾಗ ಅವರಿಗೆ ಲೋಯೋಪಯೋಗಿ ಖಾತೆಯೇ ಬೇಕು. ಆದರೆ, ಬಿ.ಸಿ. ಪಾಟೀಲ್ ಅವರು ಬೇರೆ ಖಾತೆ ಕೊಟ್ಟರೂ ನನಗೆ ಕೃಷಿ ಇಲಾಖೆಯೇ ಬೇಕು ಎಂದು ಕೇಳಿ ಪಡೆದಿದ್ದಾರೆ' ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರವಿವಾರ ಸಹಕಾರ ಇಲಾಖೆಯಿಂದ ಏರ್ಪಡಿಸಿದ್ದ ಕೊರೋನ ವಾರಿಯರ್ಸ್ ಆಗಿರುವ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ.ಸಹಾಯಧನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿ.ಸಿ.ಪಾಟೀಲ್ ಅವರು 60 ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಿದ್ದು, ಅವರು ನಿಜವಾದ ಮಣ್ಣಿನ ಮಗ ಎಂದು ಶ್ಲಾಘಿಸಿದರು.

ಡಿಸಿಸಿ ಬ್ಯಾಂಕ್ ವಿಭಜನೆ: ಬೆಂಗಳೂರು, ಹಾವೇರಿ, ಶಿವಮೊಗ್ಗ ಜಿಲ್ಲೆಯ ಮೂರು ಡಿಸಿಸಿ ಬ್ಯಾಂಕ್, ಕೋಲಾರದಲ್ಲಿ ಎರಡು ಜಿಲ್ಲೆಗಳು ಸೇರಿದಂತೆ ಏಳೆಂಟು ಜಿಲ್ಲೆಗಳಲ್ಲಿ ಎರಡು-ಮೂರು ಜಿಲ್ಲೆಗಳು ಸೇರಿಕೊಂಡು ಡಿಸಿಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳನ್ನು ವಿಭಜಿಸಿ ಶೀಘ್ರದಲ್ಲೆ ಸ್ವತಂತ್ರ ಆಡಳಿತ ತರಲಾಗುವುದು ಎಂದು ಸೋಮಶೇಖರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಆಶಾ ಕಾರ್ಯಕರ್ತೆಯರನ್ನು ಖುದ್ದು ಭೇಟಿ ಮಾಡಿ ಅವರಿಗೆ ಪ್ರೋತ್ಸಾಹ ಧನ ವಿತರಿಸಿ ಅವರ ಆಶೀರ್ವಾದ ಪಡೆಯಬೇಕೆಂಬ ನಿಟ್ಟಿನಲ್ಲಿ ಸಹಕಾರ ಸಚಿವ ಸೋಮಶೇಖರ್ ಅವರು ಕೆಲಸ ಮಾಡುತ್ತಿದ್ದು, ಖುದ್ದು ಅವರು ಸಹಕಾರ ಧುರೀಣರು. ಹೀಗಾಗಿ ಅವರು ಆ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಆಶಾ ಕಾರ್ಯಕರ್ತೆಯರಿಗೆ ಸೀರೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಯು.ಬಿ.ಬಣಕಾರ್, ಪಿಎಲ್ ಡಿ ಬ್ಯಾಂಕಿನ ನಿರ್ದೇಶಕ ಲಿಂಗರಾಜ್ ಹಾಜರಿದ್ದರು.

ನಮಗೆ ಗ್ರಹಣ ಇಲ್ಲ

ನನಗಾಗಲೀ, ಸಚಿವ ಬಿ.ಸಿ.ಪಾಟೀಲರಿಗಾಗಲಿ ಯಾವುದೇ ಗ್ರಹಣ ಇಲ್ಲ. ಗುಳಿಕ ಕಾಲ, ರಾಹುಕಾಲವೂ ಇಲ್ಲ. ನಮಗೆ ಗೊತ್ತಿರುವುದು ಒಂದೇ ಅದು ಕೆಲಸ, ಕೆಲಸ. ಹೀಗಾಗಿ ರಾಜ್ಯದಲ್ಲಿ ಮಾರಕ ಕೊರೋನ ಸೋಂಕಿನ ಭೀತಿ ಇದ್ದರೂ ಪ್ರತಿಜಿಲ್ಲೆಗಳಿಗೂ ಭೇಟಿ ನೀಡುತ್ತಿದ್ದು, ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ

-ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News