ವಿಧಾನ ಪರಿಷತ್ ಚುನಾವಣೆ: ಮೂರು ಪಕ್ಷಗಳ ಏಳು ಮಂದಿ ಅವಿರೋಧ ಆಯ್ಕೆ

Update: 2020-06-22 14:30 GMT

ಬೆಂಗಳೂರು, ಜೂ. 22: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಇದೇ ತಿಂಗಳ 29ರಂದು ನಿಗದಿಯಾಗಿದ್ದ ದ್ವೈವಾಷಿಕ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಮೂರು ಪಕ್ಷಗಳ ಏಳು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಪ್ರಕಟಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಅವಿರೋಧ ಆಯ್ಕೆ ಪ್ರಕಟಿಸಿದ ಅವರು, ಬಿಜೆಪಿಯ ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ, ಪ್ರತಾಪ ಸಿಂಹ ನಾಯಕ್, ಕಾಂಗ್ರೆಸ್ ಪಕ್ಷದ ನಸೀರ್ ಅಹ್ಮದ್, ಬಿ.ಕೆ.ಹರಿಪ್ರಸಾದ್ ಹಾಗೂ ಜೆಡಿಎಸ್‍ನ ಇಂಚರ ಗೋವಿಂದರಾಜ್ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದರು.

ಪರಿಷತ್ತಿನ ಏಳು ಸ್ಥಾನಗಳಿಗೆ ನಿಗದಿಯಾಗಿದ್ದ ಚುನಾವಣಾ ಉಮೇದುವಾರಿಕೆ ಹಿಂಪಡೆಯಲು ಸೋಮವಾರ(ಜೂ.22) ಕೊನೆಯ ದಿನವಾಗಿತ್ತು. ಏಳು ಸ್ಥಾನಗಳಿಗೆ ಮೂರು ಪಕ್ಷಗಳ ಏಳು ಮಂದಿ ಹೊರತು ಬೇರೆ ಯಾರೂ ಚುನಾವಣಾ ಕಣದಲ್ಲಿ ಉಳಿದಿರಲಿಲ್ಲ. ಹೀಗಾಗಿ ಚುನಾವಣೆ ಇಲ್ಲದೆ ಏಳು ಮಂದಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ವಿಶಾಲಾಕ್ಷಿ ತಿಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾಗಿ ಇಬ್ಬರು ಕಣಕ್ಕಿಳಿದಿದ್ದರು. ಆದರೆ, ನಾಮಪತ್ರಕ್ಕೆ ಸೂಚಕರಾಗಿ ಶಾಸಕರ ಸಹಿ ಇಲ್ಲದ ಕಾರಣಕ್ಕೆ ಎರಡು ನಾಮಪತ್ರಗಳನ್ನು ತಿರಸ್ಕೃತಗೊಂಡಿದ್ದವು. ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆ ಪ್ರಕಟಿಸಿದ ಹಿನ್ನೆಲೆಯಲ್ಲಿ ನೂತನ ಸದಸ್ಯ ಬಿ.ಕೆ.ಹರಿಪ್ರಸಾದ್, ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಂದ ಪ್ರಮಾಣ ಪತ್ರ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News