ಚೀನಾದ ವಿರುದ್ಧ ಹೋರಾಡಲು ಸೇನೆಯಲ್ಲಿ ಅವಕಾಶ ನೀಡಿ: ರಾಷ್ಟ್ರಪತಿಗೆ ರಾಜ್ಯದ ಯುವಕನಿಂದ ರಕ್ತದಲ್ಲಿ ಪತ್ರ
ಬೆಂಗಳೂರು, ಜೂ.22: ಗಲ್ವಾನ್ ಕಣಿವೆಯಲ್ಲಿ ಕಳೆದ ವಾರ ನಡೆದಿದ್ದ ಭೀಕರ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಚೀನಾದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಚೀನಾದ ವಿರುದ್ಧ ಹೋರಾಡಲು ಭಾರತೀಯ ಸೈನ್ಯದಲ್ಲಿ ಅವಕಾಶ ನೀಡಬೇಕು ಎಂದು ಕೋರಿ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಹೋಂ ಗಾರ್ಡ್ ಸಿಬ್ಬಂದಿಯೊಬ್ಬರು ರಾಷ್ಟ್ರಪತಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
'ನನ್ನ ದೇಶವನ್ನು ನಾನು ಬಹುವಾಗಿ ಪ್ರೀತಿಸುತ್ತೇನೆ. ದೇಶದ ರಕ್ಷಣೆಗಾಗಿ ಸೈನ್ಯಕ್ಕೆ ಸೇರಬೇಕೆಂಬ ಬಹುದಾಸೆಯನ್ನು ಇಟ್ಟುಕೊಂಡಿದ್ದೇನೆ. ಹೀಗಾಗಿ, ಚೀನಾದ ವಿರುದ್ಧ ಹೋರಾಡಲು ಭಾರತೀಯ ಸೈನ್ಯದಲ್ಲಿ ಅವಕಾಶ ನೀಡಬೇಕು. ನನ್ನ ರಕ್ತವು ದೇಶ ಸೇವೆಗಾಗಿ ಕುದಿಯುತ್ತಿದೆ' ಎಂದು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಮಸ್ಕಿ ಪಟ್ಟಣದ ಹೋಂ ಗಾರ್ಡ್ ಸಿಬ್ಬಂದಿ ಲಕ್ಷ್ಮಣ ಮಡಿವಾಳ ಕೋರಿದ್ದಾರೆ.
ಚೀನಾ ಹಾಗೂ ಭಾರತೀಯ ಸೇನಾಪಡೆಗಳ ನಡುವಿನ ಘರ್ಷಣೆಯಲ್ಲಿ ಭಾರತದ ಯೋಧರು ಹುತಾತ್ಮರಾಗಿರುವುದು ವ್ಯರ್ಥವಾಗಬಾರದು. ನನ್ನ ದೇಶವನ್ನು ನಾನು ಬಹುವಾಗಿ ಪ್ರೀತಿಸುತ್ತೇನೆ. ನನ್ನ ದೇಶಕ್ಕಾಗಿ ನಾನು ಹೋರಾಡಲು ಸಿದ್ಧನಾಗಿದ್ದೇನೆ. ಹೀಗಾಗಿ, ಸೈನ್ಯದಲ್ಲಿ ಸೇರಿಸಿಕೊಳ್ಳಲು ಅವಕಾಶ ನೀಡಿ ಎಂದು ಪತ್ರದಲ್ಲಿ ಬರೆದಿದ್ದಾರೆ.