ಶಿಶುವಿಗೆ ರಕ್ತ ನೀಡಲು ಜನರ ಹಿಂದೇಟು: ಶಿಬಿರ ಏರ್ಪಡಿಸಿ ರಕ್ತ ಪೂರೈಸಿದ ಜಮಾತ್ ಅಹ್ಲೆ ಹದೀಸ್
ಧಾರವಾಡ, ಜೂ.22: ನವಜಾತ ಶಿಶುವಿಗೆ ರಕ್ತದಾನ ಮಾಡಲು ಯಾರಬ್ಬರೂ ಮುಂದಾಗದ ಹಿನ್ನೆಲೆ ನಗರದ ಜಕಣೀಬಾವಿ ಬಳಿಯ ಮಹಮ್ಮದ್ ಮಸೀದಿಯ ಜಮಾತ್ ಅಹ್ಲೆ ಹದೀಸ್ ಟ್ರಸ್ಟ್ ಕೈ ಜೋಡಿಸಿ ರಕ್ತದಾನ ಶಿಬಿರ ಏರ್ಪಡಿಸಿ ಮಾನವೀಯತೆ ಮೆರೆದಿದೆ.
ನಗರದ ಜಿಲ್ಲಾಸ್ಪತ್ರೆಯಲ್ಲಿ ಕೊರೋನ ಸೋಂಕು ಭೀತಿ ಹಿನ್ನೆಲೆ ರಕ್ತದಾನ ಮಾಡುವುದಕ್ಕೆ ಜನರೇ ಮುಂದಾಗುತ್ತಿಲ್ಲ. ಇದನ್ನರಿತ ಮಹಮ್ಮದ್ ಮಸೀದಿಯ ಜಮಾತ್ ಅಹ್ಲೆ ಹದೀಸ್ ಟ್ರಸ್ಟ್ ರಕ್ತದಾನ ಶಿಬಿರ ನಡೆಸಲು ಮುಂದಾಗಿದೆ. ಜಮಾತ್ ಅಹ್ಲೆ ಹದೀಸ್ ಮಸೀದಿಯ ಆವರಣದಲ್ಲಿಯೇ ರಕ್ತದಾನ ಶಿಬಿರ ನಡೆಸಲಾಗಿದ್ದು, 90 ಮಂದಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಅಚ್ಯುತ್, ಜಿಲ್ಲಾ ಆಸ್ಪತ್ರೆಯಲ್ಲಿ ಜನಿಸಿರುವ ಮಗುವೊಂದು ಕೇವಲ 900 ಗ್ರಾಂ ಮಾತ್ರ ತೂಕ ಇತ್ತು. ಆ ಮಗುವಿಗೆ ತುರ್ತು ರಕ್ತದ ಅಗತ್ಯವೂ ಎದುರಾಗಿತ್ತು. ಮಸೀದಿಯಲ್ಲಿ ನಡೆದ ರಕ್ತದಾನ ಶಿಬಿರದಿಂದ ಮಗುವಿನ ಜೀವ ಉಳಿಸುವುದಕ್ಕೂ ಸಹಾಯವಾಗಿದೆ. ಅಲ್ಲದೇ ಹಲವು ರೋಗಿಗಳಿಗೆ ಈ ರಕ್ತದಾನದಿಂದ ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ.