ವಿದ್ಯಾರ್ಥಿಗಳು, ಪರೀಕ್ಷಾ ಸಿಬ್ಬಂದಿಯ ಜೀವದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ: ಕುಮಾರಸ್ವಾಮಿ
ಬೆಂಗಳೂರು,ಜೂ.23: ಕೊರೋನ ಭೀತಿಯ ನಡುವೆಯೂ ಜೂ.25ರಿಂದ ಎಸೆಸೆಲ್ಸಿ ಪರೀಕ್ಷೆ ನಡೆಸಲು ರಾಜ್ಯ ಸರಕಾರ ಸಿದ್ಧತೆ ನಡೆಸುತ್ತಿದೆ. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಏನಾದರೂ ಅವಘಡ ಸಂಭವಿಸಿದರೆ ಶಿಕ್ಷಣ ಸಚಿವರು ಮತ್ತು ರಾಜ್ಯ ಸರ್ಕಾರವೇ ಹೊಣೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಗುರುವಾರದಿಂದ ರಾಜ್ಯದಾದ್ಯಂತ ಎಸೆಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಈ ನಿರ್ಧಾರದಿಂದ ತಕ್ಷಣವೇ ಹಿಂದೆ ಸರಿಯಬೇಕು. ಪರೀಕ್ಷೆ ನಡೆಸಲೇಬೇಕು ಎಂದಾದರೆ ಅಕ್ಟೋಬರ್ ತಿಂಗಳವರೆಗೆ ಕಾಯಲಿ ಎಂದು ತಿಳಿಸಿದ್ದಾರೆ.
"ಕೊರೋನ ಸೋಂಕು ಏರುಗತಿಯಲ್ಲಿ ಸಾವಿನ ನಗಾರಿ ಬಾರಿಸುತ್ತಿರುವ ಇಂತಹ ಆತಂಕದ ಸಂದರ್ಭದಲ್ಲಿ ಸುಮಾರು ಎಂಟು ಲಕ್ಷ ಎಸೆಸೆಲ್ಸಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಪರೀಕ್ಷಾ ಸಿಬ್ಬಂದಿ ಸೇರಿದಂತೆ 24 ಲಕ್ಷ ಮಂದಿಯ ಜೀವ ಮತ್ತು ಭವಿಷ್ಯದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ".
"ಕೊರೋನ ಸೋಂಕು ಸಮುದಾಯ ಪ್ರಸರಣ ಭೀತಿಯ ಹಿನ್ನೆಲೆಯಲ್ಲಿ ನೆರೆಯ ತೆಲಂಗಾಣ ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನು ರದ್ದುಪಡಿಸಿ ಉತ್ತೀರ್ಣ ಗೊಳಿಸಲಾಗಿದೆ. ಅದೇ ರೀತಿಯಲ್ಲಿ ರಾಜ್ಯ ಸರ್ಕಾರ ನಿರ್ಧಾರ ತಳೆಯಬಹುದು. ಪರೀಕ್ಷೆಗಳನ್ನು ನಡೆಸಲೇ ಬೇಕೆಂದರೆ ಅಕ್ಟೋಬರ್ ತಿಂಗಳವರೆಗೆ ಕಾಯಲಿ" ಎಂದು ಸೂಚಿಸಿರುವ ಅವರು, "ಏನಾದರೂ ಅವಘಡ ಸಂಭವಿಸಿದರೆ ಶಿಕ್ಷಣ ಸಚಿವರು ಮತ್ತು ರಾಜ್ಯ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡುತ್ತೇನೆ. ಸರ್ಕಾರ ಈ ಬಗ್ಗೆ ತಕ್ಷಣವೇ ನಿರ್ಧಾರ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.
ಗುರುವಾರದಿಂದ ರಾಜ್ಯದಾದ್ಯಂತ SSLC ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಈ ನಿರ್ಧಾರದಿಂದ ತಕ್ಷಣವೇ ಹಿಂದೆ ಸರಿಯಬೇಕು. ಪರೀಕ್ಷೆ ನಡೆಸಲೇಬೇಕು ಎಂದಾದರೆ ಅಕ್ಟೋಬರ್ ತಿಂಗಳವರೆಗೆ ಕಾಯ್ದು ನಡೆಸಲಿ.
— H D Kumaraswamy (@hd_kumaraswamy) June 23, 2020
1/4