ಕೊರೋನ ವೈರಸ್: ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ದರ ನಿಗದಿಪಡಿಸಿದ ರಾಜ್ಯ ಸರಕಾರ
ಬೆಂಗಳೂರು, ಜೂ.23: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಸಂರ್ದದಲ್ಲಿ ಎಲ್ಲೆಡೆ ಬೆಡ್‍ಗಳ ಕೊರತೆ ಎದುರಾಗಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ಸರಕಾರ ಚಿಂತನೆ ನಡೆಸಿದೆ. ಅದರ ನಡುವೆಯೇ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ಶುಲ್ಕದ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ರಾಜ್ಯ ಸರಕಾರ ನಿಗದಿಪಡಿಸಿರುವ ಮಾರ್ಗಸೂಚಿಯ ಅನ್ವಯ ಖಾಸಗಿ ಆಸ್ಪತ್ರೆಗಳು ಶುಲ್ಕವನ್ನು ಪಡೆಯಬೇಕು. ಒಂದು ವೇಳೆ ದರಕ್ಕಿಂತ ಅಧಿಕ ಶುಲ್ಕವನ್ನು ಪಡೆದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
ರಾಜ್ಯ ಸರಕಾರಕ್ಕೆ ಕೆಲವು ದಿನಗಳ ಹಿಂದೆಯಷ್ಟೇ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ಸಂಬಂಧ ಪ್ರಾಸ್ತಾವಿತ ಶುಲ್ಕ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದ್ದವು. ಕರ್ನಾಟಕ ಆರೋಗ್ಯ ಕಾಳಜಿ ಸಂಘಟನೆಗಳ ಒಕ್ಕೂಟದ(ಎಫ್‍ಎಚ್‍ಎಕೆ) ಪ್ರತಿನಿಧಿಯನ್ನು ಒಳಗೊಂಡಂತೆ 8 ಮಂದಿ ಸದಸ್ಯರ ದರ ನಿಗದಿ ಸಮಿತಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕುಟುಂಬದ ರೋಗಿಗಳಿಗೆ ಕ್ರಮವಾಗಿ ಸಾಮಾನ್ಯ ವಾರ್ಡ್‍ಗೆ 5,200, ಆಮ್ಲಜನಕ ಸಹಿತ ವಾರ್ಡ್ ಗೆ 7 ಸಾವಿರ, ತೀವ್ರ ನಿಗಾ ಘಟಕಕ್ಕೆ 8,500 ಹಾಗೂ ವೆಂಟಿಲೇಟರ್ ಸಹಿತ ಐಸಿಯುವಿಗೆ 10 ಸಾವಿರ ಶುಲ್ಕಕ್ಕೆ ಬೆಂಬಲ ವ್ಯಕ್ತಪಡಿಸಿತ್ತು. ಆದರೆ, ಸಾಮಾನ್ಯ ರೋಗಿಗಳಿಗೆ ಪ್ರಸ್ತಾಪಿಸಿದ ಶುಲ್ಕದಲ್ಲಿ ಶೇ. 20 ರಷ್ಟು ಕಡಿತ ಮಾಡುವಂತೆ ಸೂಚಿಸಲಾಗಿತ್ತು. ಕೋವಿಡ್ ಕಾರ್ಯಪಡೆ ಕೂಡ ಸಮಿತಿಯ ಶಿಫಾರಸ್ಸಿಗೆ ಸಹಮತಿ ಸೂಚಿಸಿತ್ತು. ಅದರಂತೆ ಶುಲ್ಕವನ್ನು ಇಳಿಕೆ ಮಾಡಲಾಗಿದೆ.
ರಾಜ್ಯಾದ್ಯಂತ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ 518 ಖಾಸಗಿ ವೈದ್ಯಕೀಯ ಕಾಲೇಜುಗಳು ಹಾಗೂ ಆಸ್ಪತ್ರೆಗಳು ನೋಂದಾವಣಿಯಾಗಿವೆ. ಆದರೆ, ಸರಕಾರ ನಿಗದಿ ಮಾಡಿರುವ ಎಲ್ಲ ನಿಯಮಾವಳಿಗಳು ಖಾಸಗಿ ಆಸ್ಪತ್ರೆಗಳಿಗೂ ಅನ್ವಯವಾಗಲಿವೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಹಾಸಿಗೆಗಳು ಮೀಸಲು: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಶೇ.50 ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು ಹಾಗೂ ಶೇ.50 ರಷ್ಟು ಹಾಸಿಗೆಗಳನ್ನು ಸರಕಾರಿ ಆಸ್ಪತ್ರೆಗಳಿಂದ ಶಿಫಾರಸು ಮಾಡುವ ರೋಗಿಗಳಿಗಾಗಿ ಮೀಸಲಿಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ (ದಿನಕ್ಕೆ)
ಚಿಕಿತ್ಸಾ ವಿಧಾನ- ಆಯುಷ್ಮಾನ್ ಫಲಾನುಭವಿ- ಸಾಮಾನ್ಯ ರೋಗಿ
ಸಾಮಾನ್ಯ ವಾರ್ಡ್- 5,200 - 10,000
ಆಮ್ಲಜನಕ ಸಹಿತ ವಾರ್ಡ್- 7,500 - 12,000
ಐಸಿಯು ಹಾಸಿಗೆ- 8,500 - 15,000
ವೆಂಟಿಲೇಟರ್ ಸಹಿತ ಐಸಿಯು- 10,000 -25,000