ಕೆ.ಸಿ.ವ್ಯಾಲಿ, ಎತ್ತಿನಹೊಳೆ ಕಾಮಗಾರಿ ಚುರುಕುಗೊಳಿಸಲು ಸಿಎಂ ಯಡಿಯೂರಪ್ಪ ಸೂಚನೆ
ಬೆಂಗಳೂರು, ಜೂ. 23: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಬರ ಪೀಡಿತ ಜಿಲ್ಲೆಗಳ ಕೆರೆ ತುಂಬಿಸುವ ಹಾಗೂ ನೀರೊದಗಿಸುವ ಕೆ.ಸಿ.ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆಗಳ ಕಾಮಗಾರಿಗಳನ್ನು ಚುರುಕುಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಮಂಗಳವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗದ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕೆ.ಸಿ.ವ್ಯಾಲಿ ಯೋಜನೆಯಡಿ ಬೆಂಗಳೂರು ನಗರದಿಂದ 400 ಎಂಎಲ್‍ಡಿ ಸಂಸ್ಕರಿಸಿ ನೀರನ್ನು ಕೋಲಾರ ಜಿಲ್ಲೆಗೆ ಒದಗಿಸಬೇಕಾಗಿದೆ. ಆದರೆ, ಪ್ರಸ್ತುತ ಕೇವಲ 284 ಎಂಎಲ್‍ಡಿ ನೀರು ಮಾತ್ರ ಲಭ್ಯವಿದೆ. ಮಳೆ ನೀರು ಸಾಕಷ್ಟು ಪ್ರಮಾಣದಲ್ಲಿ ಒಳಚರಂಡಿ ಸೇರದೆ, ಸಂಸ್ಕರಣೆಗೆ ಲಭ್ಯವಾಗುತ್ತಿಲ್ಲ. ಆದುದರಿಂದ ಹೆಚ್ಚಿನ ನೀರು ಲಭ್ಯವಾಗಿಸಲು ಬೆಂಗಳೂರು ಜಲ ಮಂಡಲಿ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಎಸ್‍ಟಿಪಿಗಳ ಸಾಮರ್ಥ್ಯ ವರ್ಧನೆಗೆ ಕ್ರಮ ವಹಿಸಬೇಕು. ಇದರಿಂದ ಹೆಚ್ಚಿನ ತ್ಯಾಜ್ಯ ನೀರು ದೊರೆಯಲಿದ್ದು, ಅದನ್ನು ಸಂಸ್ಕರಿಸಿ ಒದಗಿಸಲು ಅನುಕೂಲವಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಇದೇ ವೇಳೆ ಎತ್ತಿನಹೊಳೆ ಯೋಜನೆಯಡಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿನ ತೊಡಕುಗಳನ್ನು ನಿವಾರಿಸಿ, ಕಾಮಗಾರಿ ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಕೋಲಾರ ಜನಪ್ರತಿನಿಧಿಗಳ ನಿಯೋಗಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದರು.
ಸಭೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ಅಬಕಾರಿ ಹಾಗೂ ಕೋಲಾರ ಉಸ್ತುವಾರಿ ಸಚಿವ ಕೆ.ನಾಗೇಶ್, ಸಂಸದ ಮುನಿಸ್ವಾಮಿ, ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.