ಕೊರೋನ ಭೀತಿಯ ನಡುವೆಯೇ ರಾಜ್ಯಾದ್ಯಂತ ಗುರುವಾರದಿಂದ ಎಸೆಸೆಲ್ಸಿ ಪರೀಕ್ಷೆ

Update: 2020-06-23 15:18 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.23: ಕೋವಿಡ್-19ರ ಭೀತಿಯ ನಡುವೆಯೇ ಎಸೆಸೆಲ್ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜೂ.25ರಿಂದ ರಾಜ್ಯಾದ್ಯಂತ ಒಟ್ಟು 3,209 ಪರೀಕ್ಷಾ ಕೇಂದ್ರಗಳಲ್ಲಿ 8,48,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಬೆಂಗಳೂರು ವಿಭಾಗದಲ್ಲಿ 1086, ಪರೀಕ್ಷಾ ಕೇಂದ್ರಗಳು, ಮೈಸೂರು ವಿಭಾಗದಲ್ಲಿ 629, ಬೆಳಗಾವಿ ವಿಭಾಗದಲ್ಲಿ 871, ಕಲಬುರಗಿ ವಿಭಾಗದಲ್ಲಿ 618 ಕೇಂದ್ರಗಳು ಸೇರಿದಂತೆ ರಾಜ್ಯಾದ್ಯಂತ ಒಟ್ಟು 3209 ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್-19 ಮಾರ್ಗಸೂಚಿ ಅನ್ವಯ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಸಿಬ್ಬಂದಿಗಳ ಸಂಖ್ಯೆ: ಎಸೆಸೆಲ್ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಅನುಕೂಲವಾಗುವಂತೆ 34 ಮಂದಿ ಉಪನಿರ್ದೇಶಕರು, 204 ಶಿಕ್ಷಣಾಧಿಕಾರಿ, 34 ಜಿಲ್ಲಾ ನೋಡಲ್ ಅಧಿಕಾರಿ, 204 ತಾಲೂಕು ನೋಡಲ್ ಅಧಿಕಾರಿ, 2879 ಪರೀಕ್ಷಾ ಕೇಂದ್ರದ ಮುಖ್ಯ ಶಿಕ್ಷಕರು, 2,879 ಪ್ರಶ್ನೆ ಪತ್ರಿಕೆ ಅಭಿರಕ್ಷಕರು ಹಾಗೂ 50,787 ಮಂದಿ ಕೊಠಡಿ ಮೇಲ್ವಿಚಾರಕರು ಸೇರಿದಂತೆ 81,267 ಸಿಬ್ಬಂದಿಗಳು ನಿಯೋಜನೆ ಮಾಡಲಾಗಿದೆ.

ಯಾವುದಾದರು ವಿದ್ಯಾರ್ಥಿಯು ಕೆಮ್ಮು, ನೆಗಡಿ, ಜ್ವರ ಮೊದಲಾದವುಗಳಿಂದ ಬಳಲುತ್ತಿದ್ದಲ್ಲಿ, ಅದೇ ಪರೀಕ್ಷಾ ಕೇಂದ್ರದಲ್ಲಿ ವಿಶೇಷ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುವುದು. ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಕನಿಷ್ಠ ಒಂದು ಮೀಟರ್ ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಪ್ರತಿ ಕೊಠಡಿಯಲ್ಲಿ ಒಂದು ಬೆಂಚಿಗೆ ಇಬ್ಬರು ಮಾತ್ರ ಹಾಗೂ ಕೊಠಡಿಯಲ್ಲಿ ಗರಿಷ್ಠ 18ರಿಂದ 20 ಮಕ್ಕಳು ಇರುವಂತೆ ಆಸನ ವ್ಯವಸ್ಥೆ ಮಾಡಲಾಗಿದೆ,

ಪರೀಕ್ಷಾ ಕೇಂದ್ರದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳು, ಸಂದೇಹಗಳನ್ನು ಪರಿಹರಿಸಿಕೊಳ್ಳಲು ಮಂಡಳಿಯಿಂದ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ದೂ.080-23310075/76ಕ್ಕೆ ಕರೆ ಮಾಡಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳು

- ಪರೀಕ್ಷಾ ಮಂಡಳಿಯಿಂದ ಒದಗಿಸಲಾದ ಥರ್ಮಲ್ ಸ್ಕ್ಯಾನರ್ ಗಳ ಸಂಖ್ಯೆ- 7,115

- ಜಿಲ್ಲಾ ಕೇಂದ್ರಗಳಲ್ಲಿ ತೆರೆಯಲಾದ ಹೆಲ್ಪ್ ಡೆಸ್ಕ್ ಗಳ ಸಂಖ್ಯೆ- 34

- 3209 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 5,755 ಆರೋಗ್ಯ ತಪಾಸಣಾ ಕೇಂದ್ರ ತೆರೆಯಲಾಗಿದೆ,

- ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರು ಸ್ವಯಂ ಸೇವಕರಂತೆ ಆರೋಗ್ಯ ತಪಾಸಣಾ ಸಹಾಯಕ್ಕೆ 6,418 ಸ್ವಯಂ ಸೇವಕರು ನೇಮಕಗೊಂಡಿದ್ದಾರೆ

- ಪ್ರತಿ ತಾಲೂಕು ಹಂತದಲ್ಲಿ ತುರ್ತು ಸಂದರ್ಭಕ್ಕಾಗಿ ಆರೋಗ್ಯ ಇಲಾಖೆ ವತಿಯಿಂದ ಒಂದು ತುರ್ತು ಚಿಕಿತ್ಸಾ ವಾಹನ ಕಾಯ್ದಿರಿಸಲಾಗಿದೆ

ಉಚಿತ ಪ್ರಯಾಣ

ಕರಾವಳಿ ಮತ್ತು ಮಲೆನಾಡು ಪ್ರದೇಶದ ವಿದ್ಯಾರ್ಥಿಗಳು, ದೂರ ಸಂಪರ್ಕ ರಹಿತ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರಕ್ಕೆ ತೆರಳಲು ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ವಿದ್ಯಾರ್ಥಿಗಳು ಬಯಸಿದಲ್ಲಿ ಪರೀಕ್ಷಾ ಕೇಂದ್ರದ ಸಮೀಪದಲ್ಲಿನ ಸರಕಾರಿ ವಿದ್ಯಾರ್ಥಿ ನಿಯಮಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದಂತೆ ಎಲ್ಲ ಪ್ರದೇಶದ ವಿದ್ಯಾರ್ಥಿಗಳಿಗೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲ ಸಾರಿಗೆ ಬಸ್‍ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ.

-ಎಲ್ಲ ಜಿಲ್ಲೆಯ ಖಾಸಗಿ ಶಾಲಾ ವಾಹನಗಳನ್ನು ಹಾಗೂ ಅವಶ್ಯವಿದ್ದ ಕಡೆ ಸರಕಾರಿ ಒಪ್ಪಂದದ ಮೇರೆಗೆ ಸಾರಿಗೆ ವ್ಯವಸ್ಥೆಯನ್ನು ಮಾಡಲು ಬಸ್ಸುಗಳನ್ನು ಪಡೆದುಕೊಳ್ಳಲಾಗಿದೆ. ಒಟ್ಟು 7,854 ಪಿಕ್‍ಆಪ್ ಪಾಯಿಂಟ್‍ಗಳನ್ನು ಗುರುತಿಸಿ ಒಟ್ಟು 2,289 ಖಾಸಗಿ ಶಾಲಾವಾಹನ, ಸರಕಾರಿ ಸ್ವಾಮ್ಯದ ಒಪ್ಪಂದದ ಮೇರೆಗೆ 520 ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಯಾವುದೇ ವಿದ್ಯಾರ್ಥಿ ಕೋವಿಡ್-19 ಪಾಸಿಟಿವ್ ಎಂದು ಗುರುತಿಸ್ಪಟ್ಟಿದ್ದಲ್ಲಿ ಅಥವಾ ಕ್ವಾರಂಟೈನಲ್ಲಿರುವ ವಿದ್ಯಾರ್ಥಿಯಾಗಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಹಾಜರಾಗಲು ಅನುಮತಿ ನೀಡುವುದು ಹಾಗೂ ಸದರಿ ಪರೀಕ್ಷೆಯನ್ನು ಪ್ರಥಮ ಅವಕಾಶ ಎಂದು ಪರಿಗಣಿಸಲಾಗುತ್ತದೆ.

ವಿದ್ಯಾರ್ಥಿಗಳ ವಿವರ

-4,48,560 ಬಾಲಕರು

-3,99,643 ಬಾಲಕಿಯರು

-3,78,337 ನಗರ ಪ್ರದೇಶದ ವಿದ್ಯಾರ್ಥಿಗಳು

-4,49,866 ಗ್ರಾಮೀಣ ವಿದ್ಯಾರ್ಥಿಗಳು

-12,674 -ಪರೀಕ್ಷಾ ಕೇಂದ್ರ ಬದಲಿಸಿಕೊಂಡ ವಿದ್ಯಾರ್ಥಿಗಳು

-14,699 - ಪರೀಕ್ಷೆಗೆ ನೋಂದಾಯಿಸಿಕೊಂಡ ಶಾಲೆಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News