ರಾಜ್ಯ ಪ್ರವಾಸೋದ್ಯಮಕ್ಕೆ 7 ಸಾವಿರ ಕೋಟಿ ರೂ.ನಷ್ಟ: ಸಚಿವ ಸಿ.ಟಿ.ರವಿ

Update: 2020-06-23 17:59 GMT

ಬೆಂಗಳೂರು, ಜೂ.23: ರಾಜ್ಯದಲ್ಲಿ ಕೋವಿಡ್-19 ಲಾಕ್‍ಡೌನ್ ಜಾರಿಯಾದ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರ ಸಂಪೂರ್ಣ ಕುಸಿದುಬಿದ್ದಿದ್ದು, ಸುಮಾರು 6 ರಿಂದ 7 ಸಾವಿರ ಕೋಟಿ ರೂ.ನಷ್ಟ ಸಂಭವಿಸಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19 ಪರಿಣಾಮ ರಾಜ್ಯದ ಯಾವುದೆ ಪ್ರವಾಸಿ ತಾಣಗಳಿಗೆ ಹೊರ ರಾಜ್ಯ ಮತ್ತು ವಿದೇಶಗಳಿಂದ ಪ್ರವಾಸಿಗಳು ಆಗಮಿಸುತ್ತಿಲ್ಲ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬರುತ್ತಿದ್ದ ಸುಮಾರು 6 ರಿಂದ 7 ಸಾವಿರ ಕೋಟಿ ರೂ.ನಷ್ಟು ಆದಾಯ ನಷ್ಟ ಉಂಟಾಗಿದೆ. ಇದರಿಂದ ಇಲಾಖೆಯನ್ನು ಮುನ್ನೆಡೆಸುವುದೆ ಸವಾಲಿನ ಕೆಲಸವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಂಗಲ್ ರೆಸಾರ್ಟ್, ಕೆಎಸ್‍ಟಿಡಿಸಿ, ಟ್ಯಾಕ್ಸಿ ಸೇರಿದಂತೆ ಮತ್ತಿತರ ಮೂಲಗಳಿಂದ ಬರುತ್ತಿದ್ದ ಆದಾಯ ಸಂಪೂರ್ಣವಾಗಿ ನಿಂತುಹೋಗಿದೆ. ಇನ್ನು ಖಾಸಗಿಯವರ ಲೆಕ್ಕ ನಮಗೆ ಈವರೆಗೂ ಸಿಕ್ಕಿಲ್ಲ. ಅದು ಸೇರ್ಪಡೆಯಾದರೆ ಇನ್ನು ಹೆಚ್ಚಿನ ನಷ್ಟವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇನ್ನು ಮುಂದೆ ತಮಿಳುನಾಡು, ಕೇರಳ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದಲ್ಲಿ ಏಕರೂಪ ಪ್ರವೇಶ ತೆರಿಗೆಯನ್ನು ಜಾರಿಗೆ ತರಲು ಮುಖ್ಯಮಂತ್ರಿಗೆ ಮನವಿ ಮಾಡಿದ್ದು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಈ ಸಂಬಂಧ ಬೇರೆ ಬೇರೆ ರಾಜ್ಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ ಎಂದು ಸಿ.ಟಿ.ರವಿ ತಿಳಿಸಿದರು.

ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚು ಪ್ರವೇಶ ತೆರಿಗೆ ಇದೆ. ಹೀಗಾಗಿ ನಮ್ಮ ರಾಜ್ಯದಲ್ಲೂ ಪ್ರವಾಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನಮಗೆ ಏಕರೂಪ ಪ್ರವೇಶ ತೆರಿಗೆ ಪದ್ಧತಿ ಬಂದರೆ ಹೊರರಾಜ್ಯ ಮತ್ತು ವಿದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ತೆಲಂಗಾಣ, ಗೋವಾ, ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ರಾಜ್ಯವನ್ನೊಳಗೊಂಡ ಏಕರೂಪ ಪ್ರವೇಶ ತೆರಿಗೆ ಪದ್ಧತಿ ಜಾರಿ ಮಾಡುವ ಪ್ರಸ್ತಾವನೆ ನಮ್ಮ ಮುಂದಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News